×
Ad

ಶ್ವೇತ ಪತ್ರಕ್ಕಾಗಿ ಪ್ರಧಾನಿಗೆ ಕಾಂಗ್ರೆಸ್ ಒತ್ತಾಯ

Update: 2016-12-28 19:19 IST

ಹೊಸದಿಲ್ಲಿ, ಡಿ.28: ನೋಟು ರದ್ದತಿಯ ಕುರಿತು ಶ್ವೇತ ಪತ್ರವೊಂದಕ್ಕಾಗಿ ಆಗ್ರಹಿಸಿರುವ ಕಾಂಗ್ರೆಸ್, ಇದರಿಂದ ಎಷ್ಟು ಕಪ್ಪು ಹಣ ಒಳಗೆ ಬಂದಿದೆಯೆಂಬುದು ಸೇರಿದಂತೆ ಹಲವು ಪ್ರಶ್ನೆಗಳನ್ನು ಪ್ರಧಾನಿ ನರೇಂದ್ರ ಮೋದಿಯವರ ಮುಂದಿರಿಸಿವೆ.

ಹಣ ಹಿಂದೆಗೆತದ ಮೇಲಿನ ಎಲ್ಲ ನಿರ್ಬಂಧಗಳನ್ನು ಹಿಂದೆಗೆಯಬೇಕು. ನೋಟು ರದ್ದತಿಯಿಂದ ತೊಂದರೆಗೊಳಗಾಗಿರುವ ರೈತರು, ವ್ಯಾಪಾರಿಗಳು ಹಾಗೂ ಬಡವರಿಗೆ ಪರಿಹಾರ ನೀಡಬೇಕೆಂಬ ಬೇಡಿಕೆಗಳ ಪಟ್ಟಿಯನ್ನೇ ಅದು ಇರಿಸಿದೆ.

 ಪ್ರಧಾನಿ ನರೇಂದ್ರ ಮೋದಿ ಎಂನರೇಗಾ ವೇತನವನ್ನು ಹಾಗೂ ಪ್ರತಿ ಕಾರ್ಮಿಕ ಕೆಲಸ ಮಾಡುವ ದಿನಗಳನ್ನು ದುಪ್ಪಟ್ಟುಗೊಳಿಸಬೇಕು. ಅಂಗಡಿಕಾರರಿಗೆ ಆದಾಯ ತೆರಿಗೆ ಹಾಗೂ ಮಾರಾಟ ತೆರಿಗೆಗಳಲ್ಲಿ ಶೇ.50ರಷ್ಟು ರಿಯಾಯಿತಿ ನೀಡಬೇಕು. ರೈತರಿಗೆ ರಬಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಶೇ.20ರಷ್ಟು ಬೋನಸ್ ಕೊಡಬೇಕು ಹಾಗೂ ಅವರ ಸಾಲಗಳನ್ನು ಮನ್ನಾ ಮಾಡಬೇಕೆಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

‘ಬೇಡಿಕೆಗಳ ಸನದಿನೊಂದಿಗೆ’ ಮಾಧ್ಯಮಗಳ ಮುಂದೆ ಬಂದ ಅವರು, ನೋಟು ರದ್ದತಿ ಘೋಷಣೆಗೆ ಮೊದಲು ರೂ.25 ಲಕ್ಷಕ್ಕಿಂತ ಹೆಚ್ಚು ಹಣವನ್ನು ಠೇವಣಿಯಿರಿಸಿರುವ ಎಲ್ಲರ ಪಟ್ಟಿಯೊಂದನ್ನು ನೀಡಬೇಕು. ಪ್ರತಿ ಬಿಪಿಎಲ್ ಕುಟುಂಬದ ಕನಿಷ್ಠ ಒಬ್ಬಳು ಮಹಿಳೆಗೆ ರೂ.25 ಸಾವಿರ ಸಹಿತ ಸಂಕಷ್ಟಕ್ಕೊಳಗಾದವರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಪ್ರಧಾನಿ ಕೆಲವು ವಿಚಾರಗಳನ್ನು ದೇಶಕ್ಕೆ ವಿವರಿಸಬೇಕೆಂದು ತಾವು ಬಯಸುತ್ತೇವೆ. ನ.8ರ ನೋಟು ರದ್ದತಿಯ ಬಳಿಕ ಎಷ್ಟು ಕಪ್ಪು ಹಣ ಹೊರಗೆ ಬಂದಿದೆ ಹಾಗೂ ದೇಶಕ್ಕೆ ಎಷ್ಟು ಆರ್ಥಿಕ ನಷ್ಟವಾಗಿದೆ? ಎಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ? ಹಾಗೂ ಅವರಿಗೆ ಯಾವುದೇ ಪರಿಹಾರ ಪಾವತಿಸಲಾಗಿದೆಯೇ? ಎಂಬುದನ್ನು ಅವರು ತಿಳಿಸಬೇಕು. ನೋಟು ರದ್ದತಿ ನಿರ್ಧಾರ ಕೈಗೊಳ್ಳುವ ಮೊದಲು ಪ್ರಧಾನಿ ಯಾರೊಂದಿಗೆ ಸಮಾಲೋಚನೆ ನಡೆಸಿದ್ದಾರೆ? ಅಂತಹ ತಜ್ಞರ ಹೆಸರುಗಳನ್ನು ತಿಳಿಸಬೇಕೆಂದು ರಾಹುಲ್ ಪತ್ರಕರ್ತರೊಡನೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News