ಡಿಜಿಟಲ್ ಪಾವತಿ ವಿಚಾರಣೆಗಳಿಗೆ ಶೀಘ್ರವೇ ‘14444’ ಸಹಾಯವಾಣಿ
ಹೊಸದಿಲ್ಲಿ,ಡಿ.28: ನೋಟು ರದ್ದತಿಯ ಬಳಿಕ ಹೆಚ್ಚಿನ ಡಿಜಿಟಲ್ ವಹಿವಾಟುಗಳಿಗೆ ಸರಕಾರವು ಒತ್ತು ನೀಡುತ್ತಿರುವ ಹಿನ್ನೆಲೆಯಲ್ಲಿ ಡಿಜಿಟಲ್ ಹಣಪಾವತಿಗಳ ಕುರಿತು ಎಲ್ಲ ವಿಚಾರಣೆಗಳಿಗೆ ಉತ್ತರಿಸಲು ಸಹಾಯವಾಣಿ-14444ನ್ನು ರೂಪಿಸುವಲ್ಲಿ ನಾಸ್ಕಾಂ, ದೂರಸಂಪರ್ಕ ಕಂಪನಿಗಳು ಮತ್ತು ನೀತಿ ಆಯೋಗ ಪರಸ್ಪರ ಕೈ ಜೋಡಿಸಿದ್ದು, ಸಾರ್ವಜನಿಕರಿಗೆ ಈ ಸಹಾಯವಾಣಿ ಶೀಘ್ರವೇ ಲಭ್ಯವಾಗಲಿದೆ.
ಬುಧವಾರ ಇಲ್ಲಿ ಡಿಜಿಟಲ್ ಹಣಪಾವತಿಗಳ ಕುರಿತ ಮುಖ್ಯಮಂತ್ರಿಗಳ ಸಮಿತಿಯ ನಾಲ್ಕನೇ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿಯ ಸಂಚಾಲಕ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು, ದೇಶಾದ್ಯಂತ ನಗದುರಹಿತ ಪಾವತಿಗಳನ್ನು ಸಾಧ್ಯವಾಗಿಸಲು ಹತ್ತು ಲಕ್ಷ ಪಾಯಿಂಟ್ ಆಫ್ ಸೇಲ್(ಪಿಒಎಸ್) ಯಂತ್ರಗಳನ್ನು ಆಮದು ಮಾಡಿಕೊಳ್ಳಲು ಯೋಜನೆ ಸಿದ್ಧಗೊಳ್ಳುತ್ತಿದೆ ಎಂದು ತಿಳಿಸಿದರು.
ಮಾಧ್ಯಮಗಳಿಗೆ ಸಭೆಯಲ್ಲಿ ನಡೆದ ಚರ್ಚೆಯ ವಿವರಗಳನ್ನು ನೀಡಿದ ನಾಯ್ಡು, ಡಿಜಿಟಲ್ ಹಣಪಾವತಿ ಪ್ರಗತಿಯ ಕುರಿತು ಸಮಿತಿಯು ಮುಂದಿನ ವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ತನ್ನ ಮಧ್ಯಂತರ ವರದಿಯನ್ನು ಸಲ್ಲಿಸಲಿದೆ ಎಂದರು.
ಡಿ.31ರಂದು ಅಂತ್ಯಗೊಳ್ಳಲಿರುವ, ಕಾರ್ಡ್ ಮೂಲಕ ಪಾವತಿಗಳಿಗೆ ಪ್ರೋತ್ಸಾಹಕಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ನಾಯ್ಡು, ದೇಶಾದ್ಯಂತ ಡಿಜಿಟಲ್ ಪಾವತಿಗಳನ್ನು ಜನಪ್ರಿಯಗೊಳಿಸಲು ಬಳಕೆದಾರರಿಗೆ ಪ್ರೋತ್ಸಾಹಧನ ಮತ್ತು ಸ್ಮಾರ್ಟ್ ಫೋನ್‌ಗಳಿಗೆ ಸಬ್ಸಿಡಿ ನೀಡುವ ಬಗ್ಗೆ ಚಿಂತನೆಗಳು ನಡೆಯುತ್ತಿವೆ ಎಂದು ತಿಳಿಸಿದರು. ಡಿ.31ರ ನಂತರವೂ ಪ್ರೋತ್ಸಾಹಕ ಕ್ರಮಗಳನ್ನು ಮುಂದುವರಿಸುವಂತೆ ಸಮಿತಿಯು ಸರಕಾರಕ್ಕೆ ಶಿಫಾರಸು ಮಾಡಲಿದೆ ಎಂದರು.