ಸಿರಿಯ ಕದನ ವಿರಾಮ ಮಾತುಕತೆಗೆ ಟರ್ಕಿ, ರಶ್ಯ ಸಮ್ಮತಿ
ಅಂಕಾರ,ಡಿ.28: ಸಿರಿಯದಲ್ಲಿ ಕದನವಿರಾಮವನ್ನು ಏರ್ಪಡಿಸುವ ಕುರಿತು ಮಾತುಕತೆ ನಡೆಸುವ ಪ್ರಸ್ತಾಪಕ್ಕೆ ಟರ್ಕಿ ಹಾಗೂ ರಶ್ಯ ದೇಶಗಳು ಸಮ್ಮತಿಸಿವೆಯೆಂದು ಟರ್ಕಿಯ ಸರಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಅನಾಡೊಲು ಏಜೆನ್ಸಿ ವರದಿ ಮಾಡಿದೆ.
ಕಳೆದ ವಾರ ರಶ್ಯ, ಟರ್ಕಿ ಹಾಗೂ ಇರಾನ್‌ಗಳ ಮಾಸ್ಕೊದಲ್ಲಿ ಮಾತುಕತೆ ನಡೆಸಿದ ಬಳಿಕ ಹೇಳಿಕೆಯೊಂದನ್ನು ನೀಡಿ, ಅಂತರ್ಯುದ್ಧ ಜರ್ಝರಿತವಾಗಿರುವ ಸಿರಿಯದಲ್ಲಿ ಶಾಂತಿ ಒಪ್ಪಂದವನ್ನೇರ್ಪಡಿಸುವ ನಿಟ್ಟಿನಲ್ಲಿ ಮಧ್ಯಸ್ಥಿಕೆ ವಹಿಸಲು ತಾವು ಸಿದ್ಧವೆಂದು ಘೋಷಿಸಿದ್ದವು. ಸಿರಿಯದಲ್ಲಿ ಕದನವಿರಾಮ ಏರ್ಪಡಿಸುವ ಕುರಿತಾಗಿ ನಡೆಯುವ ಮಾತುಕತೆಯಲ್ಲಿ ಅಮೆರಿಕವನ್ನು ಸೇರ್ಪಡೆಗೊಳಿಸಲಾಗಿಲ್ಲ. ಈ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲವಾದರೂ, ಮಾತುಕತೆಯು ತನ್ನ ಆಪ್ತ ರಾಷ್ಟ್ರವಾದ ಕಝಕಿಸ್ತಾನದಲ್ಲಿ ನಡೆಯಲಿದೆಯೆಂದು ರಶ್ಯವು ತಿಳಿಸಿದೆ.
ಸಂಭಾವ್ಯ ಶಾಂತಿ ಮಾತುಕತೆಗೆ ಪೂರ್ವಭಾವಿಯಾಗಿ ಸಿರಿಯ ಸರಕಾರವು ಪ್ರತಿಪಕ್ಷಗಳೊಂದಿಗೆ ಮಾತುಕತೆ ನಡೆಸಲಿದೆಯೆಂದು ರಶ್ಯದ ವಿದೇಶಾಂಗ ಸಚಿವರು ತಿಳಿಸಿದ್ದಾರೆ. ಆದರೆ ಸೌದಿ ಬೆಂಬಲಿತ ಪ್ರತಿಪಕ್ಷ ಒಕ್ಕೂಟವೊಂದು ತನಗೆ ಈ ಬಗ್ಗೆ ಯಾವುದೇ ಮಾಹಿತಿಯಿಲ್ಲವೆಂದು ಹೇಳಿದೆ. ಆದಾಗ್ಯೂ ತಾನು ಕದನವಿರಾಮವನ್ನು ಬೆಂಬಲಿಸುವುದಾಗಿ ಹೇಳಿದೆ.