×
Ad

ಅಜ್ಮೀರ್-ಸೀಲ್ಡಾ ಎಕ್ಸ್‌ಪ್ರೆಸ್ ಅಪಘಾತ : ಇಬ್ಬರ ಸಾವು; 43 ಮಂದಿಗೆ ಗಾಯ

Update: 2016-12-28 22:09 IST

ಕಾನ್ಪುರ, ಡಿ.28: ಕಾನ್ಪುರ ಗ್ರಾಮಾಂತರ ಜಿಲ್ಲೆಯ ರುರ ರೈಲು ನಿಲ್ದಾಣದ ಬಳಿ ಇಂದು ಮುಂಜಾನೆ ಅಜ್ಮೀರ್-ಸೀಲ್ಡಾ ಎಕ್ಸ್‌ಪ್ರೆಸ್‌ನ 15 ಬೋಗಿಗಳು ಹಳಿ ತಪ್ಪಿ, ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದು, ಇತರ 43 ಮಂದಿಗೆ ಗಾಯಗಳಾಗಿವೆ. ಇದು 2 ತಿಂಗಳೊಳಗೆ ಈ ವಲಯದಲ್ಲಿ ಸಂಭವಿಸಿದ ಎರಡನೆ ರೈಲು ಅಪಘಾತವಾಗಿದೆ.

ಪ್ರದೇಶದ ಒಣಗಿದ ಕಾಲುವೆಯೊಂದರ ಮೇಲಿನ ಸೇತುವೆಯನ್ನು ದಾಟುವ ವೇಳೆ, ಮುಂಜಾನೆ 6 ಗಂಟೆಗೆ ರುರ ರೈಲು ನಿಲ್ದಾಣದ ಬಳಿ ಈ ದುರಂತ ಸಂಭವಿಸಿದೆಯೆಂದು ಉತ್ತರ-ಮಧ್ಯ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಅಮಿತ್ ಮಾಳವೀಯ ತಿಳಿಸಿದ್ದಾರೆ.
ರೈಲಿನ 13 ಸ್ಲೀಪರ್ ಹಾಗೂ 2 ಸಾಮಾನ್ಯ ಬೋಗಿಗಳು ಹಳಿತಪ್ಪಿದ್ದು, ಇಬ್ಬರು ಪ್ರಯಾಣಿಕರು ಮೃತರಾಗಿದ್ದಾರೆ. ಇತರ 43 ಮಂದಿಗೆ ಗಾಯಗಳಾಗಿವೆಯೆಂದು ಐಜಿ(ಕಾನ್ಪುರ ವಲಯ) ಝಕಿ ಅಹ್ಮದ್ ಹೇಳಿದ್ದಾರೆ.

ಎಲ್ಲ ಪ್ರಯಾಣಿಕರನ್ನು ತೆರವುಗೊಳಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತ್ಯಗೊಂಡಿದೆ. 33 ಮಂದಿ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರೆ, 10 ಮಂದಿಯನ್ನು ಕಾನ್ಪುರದ ಹಿಲ್ಲೆಟ್ ಆಸ್ಪತ್ರೆಗೆ ಸೇರಿಸಲಾಗಿದೆಯೆಂದು ಅವರು ತಿಳಿಸಿದ್ದಾರೆ.

ಪರಿಸ್ಥಿತಿಯ ಬಗ್ಗೆ ವೈಯಕ್ತಿಕ ನಿಗಾ ವಹಿಸಿದ್ದೇನೆ. ಪ್ರಯಾಣಿಕರಿಗೆ ತಮ್ಮ ಪ್ರಯಾಣ ಮುಂದುವರಿಸಲು ಪರ್ಯಾಯ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ. ಗಾಯಾಳುಗಳಿಗೆ ಎಲ್ಲ ಸಹಾಯ ನೀಡಲಾಗುತ್ತಿದೆಯೆಂದು ರೈಲ್ವೆ ಸಚಿವ ಸುರೇಶ್ ಪ್ರಭು ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News