ಉಡುಪಿ : ಸರ್ವಧರ್ಮ ಕ್ರಿಸ್‌ಮಸ್ ಆಚರಣೆ ಉದ್ಘಾಟನೆ
ಉಡುಪಿ, ಡಿ.28: ನಾವು ಧರ್ಮಕ್ಕಾಗಿ ಸಾಯುವ ಬದಲು ಬದುಕಬೇಕು. ಜಾತಿ ಎಂಬುದು ಆರಾಧನೆಯ ರೀತಿಯಾದರೆ ಧರ್ಮ ಎಂಬುದು ಜೀವಿ ಸುವ ರೀತಿ. ನಾವು ಮುಖ್ಯವಾಗಿ ಧರ್ಮವನ್ನು ಪಾಲಿಸಬೇಕು. ಮನುಷ್ಯರು ಮನುಷ್ಯತ್ವವನ್ನು ಬೆಳೆಸಿಕೊಳ್ಳಬೇಕು. ಅದನ್ನು ಮರೆತಾಗ ನಾವು ಪಿಶಾಚಿ ಗಳಾಗುತ್ತೇವೆ ಎಂದು ಮಂಗಳೂರು ಸೈಂಟ್ ಜೋಸೆಫ್ಸ್ ಸೆಮಿನರಿಯ ಪ್ರೊಫೆಸರ್ ವಂ.ಕ್ಲಿಫರ್ಡ್ ಫೆರ್ನಾಂಡಿಸ್ ಹೇಳಿದ್ದಾರೆ.
ಉಡುಪಿ ಶೋಕಮಾತ ಇಗರ್ಜಿಯ ಆಶ್ರಯದಲ್ಲಿ ಸೌಹಾರ್ದ ಸಮಿತಿ, ಕೆಥೋಲಿಕ್ ಸಭಾ ಉಡುಪಿ ಪ್ರದೇಶ ಮತ್ತು ಘಟಕದ ವತಿಯಿಂದ ಇಗರ್ಜಿಯ ವಠಾರದಲ್ಲಿ ಬುಧವಾರ ಆಯೋಜಿಸಲಾದ ಸರ್ವಧರ್ಮ ಕ್ರಿಸ್‌ಮಸ್ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಈ ಸಮಾಜದಲ್ಲಿ ಸಂಭವಿಸುತ್ತಿರುವ ಅತ್ಯಾಚಾರ, ಕೊಲೆಗಳನ್ನು ನೋಡು ವಾಗ ನಾವು ಪ್ರಾಣಿಗಳಿಗಿಂತ ಕೀಳಾಗಿದ್ದೇವೆ. ಆದುದರಿಂದ ಇಂತಹ ಸೌಹಾರ್ದ ಕೂಟಗಳು ಪ್ರತಿದಿನ ನಡೆಯುವಂತಾಗಬೇಕು. ಈ ಭೂಮಿ ಮೇಲೆ ಒಂದು ಹನಿ ರಕ್ತ ಬೀಳದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಅದು ನಮಗೆ ಶಾಪವಾಗಿ ಪರಿಣಮಿಸುತ್ತದೆ ಎಂದರು.
ಅಧ್ಯಕ್ಷತೆಯನ್ನು ಉಡುಪಿ ವಲಯ ಪ್ರಧಾನ ಧರ್ಮಗುರು ವಂ.ಫ್ರೆಡ್ ಮಸ್ಕರೇನಸ್ ವಹಿಸಿದ್ದರು. ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹ ಪ್ರಾಧ್ಯಾಪಕಿ ಡಾ.ನಿಕೇತನ, ಕೆಥೋಲಿಕ್ ಸಭಾ ಉಡುಪಿ ಪ್ರದೇಶದ ನಿರ್ದೇಶಕ ವಂ. ಫೆರ್ಡಿನಾಂಡ್ ಗೊನ್ಸಾಲ್ವಿಸ್, ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಸಲಹಾ ಸಮಿತಿ ಸದಸ್ಯ ಅಕ್ಬರ್ ಅಲಿ ಶುಭಾಶಂಸನೆಗೈದರು.
ಸೌಹಾರ್ದ ಸಮಿತಿಯ ಸಂಚಾಲಕ ಅಲ್ಫೋನ್ಸ್ ಡಿಕೋಸ್ಟ ಸ್ವಾಗತಿಸಿದರು. ಸದಸ್ಯ ಮುಹಮ್ಮದ್ ವೌಲ ವಂದಿಸಿದರು. ಸೈಂಟ್ ಮೇರಿಸ್ ಪ್ರಾಥಮಿಕ ಶಾಲಾ ಮುಖ್ಯಸ್ಥೆ ಕ್ಲಾರಾ ಮಥಾಯಸ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸೈಂಟ್ ಮೇರಿಸ್ ವಿದ್ಯಾಸಂಸ್ಥೆ, ಪಾಂಬೂರು ಮಾನಸ ವಿಶೇಷ ಶಾಲೆ ವಿದ್ಯಾರ್ಥಿಗಳು, ಚರ್ಚ್ ಗಾಯನ ಮಂಡಳಿಯ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ವಿಶೇಷ ಆಕರ್ಷಣೆಯಾಗಿ ಕ್ರಿಸ್ಮಸ್ ಟ್ರೀ, ಗೋದಲಿ ಪ್ರದರ್ಶನ, ನಕ್ಷತ್ರಗಳ ಬೆಳಗುವಿಕೆ, ಕ್ರಿಸ್ಮಸ್ ಕೇಕ್ ವಿತರಿಸಲಾಯಿತು.