ಅನಂತ್ ಶಣೈ ಮಾಮ್ ಅಂಗಡಿ ಮುಂಜಾನೆ 4ಕ್ಕೆ ತೆರೆಯುವಾಗಲೇ ಫುಲ್!
ಮಂಗಳೂರು, ಡಿ.29: ನಿಮ್ಮ ಜೀವನದಲ್ಲಿ ಯಾವ ಬದಲಾವಣೆಯೂ ಇಲ್ಲದೇ ನಿರಂತರವಾಗಿ ಆರು ದಶಕ ಕಳೆಯುವುದನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ? ನಿಜ ಜೀವನದ ಹೀರೊ ಇಲ್ಲಿದ್ದಾರೆ ನೋಡಿ. ಮಂಗಳೂರಿನ ಅನಂತ್ ಶಣೈ ಮಾಮ್ ಅವರ ಕಬ್ಬು ಜ್ಯೂಸ್ ಅಂಗಡಿ ನಸುಕಿನ 4ಕ್ಕೆ ತೆರೆಯುತ್ತದೆ; ಕಳೆದ ಅರುವತ್ತು ವರ್ಷಗಳಿಂದ ನಿರಂತರ!
ಮಣ್ಣಗುಡ್ಡದ ರಸ್ತೆಬದಿಯಲ್ಲಿ ಇಡೀ ದಿನ ಕಳೆಯುವ ಶಣೈ ಮಾಮ್ ಚಿರಪರಿಚಿತ ಮುಖ. ಕಂಡತಕ್ಷಣ ಸ್ನೇಹದ ನಗೆ ಬೀರುತ್ತಾ ಕಬ್ಬಿನಹಾಲು ತೆಗೆಯುವಲ್ಲಿ ನಿರತರಾಗುವ ಹಿರಿಯ ಜೀವ ತಂದೆಯ ಪ್ರೀತಿಯಿಂದ ಸೇವೆ ಮಾಡುತ್ತಾರೆ.
15ನೇ ವಯಸ್ಸಿನಲ್ಲೇ ಅನಂತ್ ಶಣೈ ಅವರ ಈ ಕಾಯಕ ಆರಂಭವಾಗಿತ್ತು. ಮಂಗಳೂರಿನಲ್ಲಿ ಮೊಟ್ಟಮೊದಲ ಬಾರಿಗೆ ಭೇಲ್‌ಪುರಿ ಆರಂಭಿಸಿದ ಖ್ಯಾತಿಯೂ ಅವರದ್ದು. ಅಲೋಶಿಯಸ್ ಕಾಲೇಜು ಬಳಿಯ ಲೈಟ್‌ಹೌಸ್‌ನಲ್ಲಿ 1958ರಲ್ಲೇ ಕಾಯಕ ಆರಂಭಿಸಿದ್ದರು. ಆಗ ಕಬ್ಬಿನ ಹಾಲಿಗೆ ಲೋಟಕ್ಕೆ ಕೇವಲ ಆರು ಪೈಸೆ. ಇಂದು ಕೂಡಾ ದುಬಾರಿಯಲ್ಲ. ಈ ಆರೋಗ್ಯಪೇಯ ಲೋಟಕ್ಕೆ 15 ರೂಪಾಯಿಗೆ ಲಭ್ಯ. ಇದು ಆರೋಗ್ಯಕ್ಕೆ ಹೇಗೆ ಉತ್ತಮವೋ, ಮಾಮ್ ಅವರ ಜೀವನದ ಸಂತೋಷ ಹಾಗೂ ಸ್ವಾವಲಂಬನೆಯಲ್ಲೂ ಅಷ್ಟೇ ಮಹತ್ವದ ಪಾತ್ರ ವಹಿಸಿದೆ. ಇವರಿಗೆ ಕಬ್ಬು ಹಾಸನದಿಂದ ಬರುತ್ತದೆ. ಅದು ಕೂಡಾ ಒಬ್ಬನೇ ಪೂರೈಕೆದಾರನಿಂದ.
75ನೇ ವಯಸ್ಸಿನಲ್ಲೂ 25ರ ಹುಮ್ಮಸ್ಸು. ಮುಂಜಾನೆ 4ಕ್ಕೆ ಅಂಗಡಿ ತೆರೆದರೆ, 5ರ ವೇಳೆಗೆಲ್ಲ ಕಾಯಂ ಗಿರಾಕಿಗಳು ಬರುತ್ತಾರೆ. 24 ಬಾರಿ ಮಲೇರಿಯಾಪೀಡಿತರಾಗಿದ್ದಾರೆ. ಅದರಿಂದ ಗುಣಮುಖವಾಗಿ ಮತ್ತೆ ಕೆಲಸಕ್ಕೆ ಮರಳಲು ಕಬ್ಬಿನಹಾಲೇ ಅವರಿಗೆ ಟಾನಿಕ್.
ಕೃಪೆ:olpa.in