ನಿಷ್ಠೆ ಪ್ರಶ್ನಿಸಿದ ಕೇಂದ್ರ ಸಚಿವರಿಗೆ ತಿರುಗೇಟು ನೀಡಿದ ಏರ್ ಇಂಡಿಯಾ ಪೈಲಟ್
ಹೊಸದಿಲ್ಲಿ, ಡಿ.29: ಖಾಸಗಿ ಏರ್‌ಲೈನ್ಸ್ ಸಿಬ್ಬಂದಿಗೆ ಹೋಲಿಸಿದರೆ, ಏರ್‌ಇಂಡಿಯಾ ಸಿಬ್ಬಂದಿಯಲ್ಲಿ ಬದ್ಧತೆಯ ಕೊರತೆ ಇದೆ ಎಂದು ಹೇಳಿಕೆ ನೀಡಿದ ನಾಗರಿಕ ವಿಮಾನಯಾನ ಖಾತೆ ಸಚಿವ ಅಶೋಕ್ ಗಜಪತಿರಾಜು ಅವರಿಗೆ ಏರ್ ಇಂಡಿಯಾದ ಹಿರಿಯ ಪೈಲಟ್ ಒಬ್ಬರು ತಿರುಗೇಟು ನೀಡಿದ್ದಾರೆ. ಸಿಬ್ಬಂದಿಯ ಬದ್ಧತೆ ಪ್ರಶ್ನಿಸುವ ರಾಜಕಾರಣಿಗಳಿಗೆ ದೇಶದ ಬಗ್ಗೆ ಎಷ್ಟು ಬದ್ಧತೆ ಇದೆ ಎಂದು ಅವರು ಪ್ರಶ್ನಿಸಿದ್ದಾರೆ.
ಸುಭಾಶಿಶ್ ಮಜೂಂದಾರ್ ಎಂಬ ಹಿರಿಯ ಪೈಲಟ್, ಸಚಿವರಿಗೆ ಬರೆದ "ಸ್ಫೂರ್ತಿಯ ಕೊರತೆ, ಬದ್ಧತೆಯದ್ದಲ್ಲ" ಎಂಬ ಶೀರ್ಷಿಕೆಯ ಪತ್ರದಲ್ಲಿ, "ಏರ್ ಇಂಡಿಯಾದ ಬದ್ಧತೆ ಹೊಂದಿದ ಸಿಬ್ಬಂದಿಯಾಗಿ, ಪ್ರಾಮಾಣಿಕ ತೆರಿಗೆ ಪಾವತಿದಾರನಾಗಿ ಹಾಗೂ ದೇಶಭಕ್ತ ಪ್ರಜೆಯಾಗಿ, ಇತ್ತೀಚೆಗೆ ನಡೆದ ಚಳಿಗಾಲದ ಅಧಿವೇಶನ ಸಂಪೂರ್ಣ ವಿವಾದದಲ್ಲಿ ಕೊಚ್ಚಿಕೊಂಡು ಹೋಯಿತು. 92 ಗಂಟೆಗಳ ಕಲಾಪ ನಷ್ಟವಾಯಿತು. ಹಾಗಾದರೆ ರಾಜಕಾರಣಿಗಳಿಗೆ ದೇಶದ ಬಗ್ಗೆ ಇರುವ ಬದ್ಧತೆ ಏನು ಎಂದು ಪ್ರಶ್ನಿಸಿದ್ದಾರೆ.
ಇವೆಲ್ಲ ಗಮನಿಸಿದಾಗ ವಿಶ್ವದ ಇತರ ದೇಶಗಳ ರಾಜಕಾರಣಿಗಳಿಗೆ ಹೋಲಿಸಿದರೆ, ನಮ್ಮ ದೇಶದ ರಾಜಕಾರಣಿಗಳಿಗೆ ದೇಶದ ಬಗ್ಗೆ ಬದ್ಧತೆಯ ಕೊರತೆ ಇರುವುದು ಎದ್ದುಕಾಣುತ್ತದೆ. ಈ ಬಗ್ಗೆ ಎಲ್ಲ ಏರ್‌ಇಂಡಿಯಾ ಸಿಬ್ಬಂದಿಗೆ ನೋವು ಇದೆ ಎಂದು ವಿವರಿಸಿದ್ದಾರೆ.
ಈ ಪೈಲಟ್ ಏರ್‌ಇಂಡಿಯಾದ ದೀರ್ಘದೂರದ 777 ಬೋಯಿಂಗ್ ವಿಮಾನ ಚಾಲನೆ ಮಾಡುವವರು.