×
Ad

ಮಾಜಿ ವಿಶ್ವ ನಂ.1ಆಟಗಾರ್ತಿ ಇವಾನೊವಿಕ್ ನಿವೃತ್ತಿ

Update: 2016-12-29 10:25 IST

ಬೆಲ್‌ಗ್ರೇಡ್, ಡಿ.29: ಮಾಜಿ ಫ್ರೆಂಚ್ ಓಪನ್ ಚಾಂಪಿಯನ್ ಅನಾ ಇವಾನೊವಿಕ್ ಫಿಟ್‌ನೆಸ್ ಸಮಸ್ಯೆಯ ಕಾರಣದಿಂದ 29ರ ಹರೆಯದಲ್ಲಿ ಟೆನಿಸ್‌ನಿಂದ ನಿವೃತ್ತಿ ಘೋಷಿಸಿದ್ದಾರೆ.

2008ರ ಫ್ರೆಂಚ್ ಓಪನ್ ಫೈನಲ್‌ನಲ್ಲಿ ರಶ್ಯದ ದಿನಾರ ಸಫಿನಾರನ್ನು ಮಣಿಸಿದ್ದ ಇವಾನೊವಿಕ್ ಗ್ರಾನ್‌ಸ್ಲಾಮ್ ಟೂರ್ನಮೆಂಟ್ ಜಯಿಸಿದ ಸರ್ಬಿಯದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದರು.

‘‘ನನಗೆ ನಿವೃತ್ತಿಯಾಗದೇ ಬೇರೆ ದಾರಿಯೇ ಇಲ್ಲ. ನಾನು ವೃತ್ತಿಪರ ಟೆನಿಸ್‌ನಿಂದ ನಿವೃತ್ತಿಯಾಗಲು ಬಯಸಿದ್ದೇನೆ. ಇದೊಂದು ಕಠಿಣ ನಿರ್ಧಾರ. ನಾನು ಐದು ವರ್ಷದವಳಿದ್ದಾಗಲೇ ಟೆನಿಸ್ ಆಟಗಾರ್ತಿಯಾಗಬೇಕೆಂಬ ಕನಸು ಕಂಡಿದ್ದೆ. ನನ್ನ ಪ್ರೀತಿಯ ಹೆತ್ತವರು ನನ್ನ ಬೆಂಬಲಕ್ಕೆ ನಿಂತಿದ್ದರು. 2008ರಲ್ಲಿ ಫ್ರೆಂಚ್ ಓಪನ್ ಜಯಿಸಿ ವಿಶ್ವದ ನಂ.1 ಆಟಗಾರ್ತಿ ಎನಿಸಿಕೊಂಡಾಗ ಅಷ್ಟೊಂದು ಎತ್ತರಕ್ಕೆ ಏರುತ್ತೇನೆಂದು ಯೋಚಿಸಿಯೇ ಇರಲಿಲ್ಲ’’ ಬೆಲ್‌ಗ್ರೆಡ್‌ನಲ್ಲಿ ಜನಿಸಿದ್ದ ಆಟಗಾರ್ತಿ ಹೇಳಿದ್ದಾರೆ.

ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸಿದ್ದಾಗ ಡಬ್ಲುಟಿಎ ಟೂರ್ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನದಲ್ಲಿದ್ದ ಇವಾನೊವಿಕ್ ದಿಢೀರನೆ ಫಾರ್ಮ್ ಕಳೆದುಕೊಂಡ ಕಾರಣ 2009ರ ಅಂತ್ಯದಲ್ಲಿ 22ನೆ ಸ್ಥಾನಕ್ಕೆ ಕುಸಿದಿದ್ದರು.

2014ರಲ್ಲಿ ಅಗ್ರ-5ನೆ ರ್ಯಾಂಕಿಗೆ ವಾಪಸಾಗಿದ್ದ ಇವಾನೊವಿಕ್ 2015ರ ಫ್ರೆಂಚ್ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದರು. ಆದರೆ, ಈ ವರ್ಷ ಯುಎಸ್ ಓಪನ್‌ನಲ್ಲಿ ಮೊದಲ ಸುತ್ತಿನಲ್ಲಿ ಝೆಕ್‌ನ ಡೆನಿಸಾ ಅಲೆರ್ಟೊವಾ ವಿರುದ್ಧ ಆಘಾತಕಾರಿ ಸೋಲುಂಡಿರುವ ಇವಾನೊವಿಕ್ 60ನೆ ರ್ಯಾಂಕಿಗೆ ಕುಸಿದಿದ್ದಾರೆ.

‘‘ನಾನು ಹಲವು ಸ್ಮರಣೀಯ ಪಂದ್ಯಗಳನ್ನು ಆಡಿದ್ದೇನೆ. ವೃತ್ತಿಪರ ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನ ನೀಡಬೇಕಾದರೆ ಫಿಟ್‌ನೆಸ್ ಅತ್ಯಗತ್ಯ. ನಾನು ಕಳೆದ ಸಮಯದಿಂದ ಗಾಯದ ಸಮಸ್ಯೆ ಎದುರಿಸುತ್ತಿದ್ದೇನೆ. ನಾನು ನಿಗದಿಪಡಿಸಿದ ಮಟ್ಟದಲ್ಲಿ ಪ್ರದರ್ಶನ ನೀಡಲು ಸಾಧ್ಯವಿಲ್ಲ ಎಂದು ಗೊತ್ತಾದ ಹಿನ್ನೆಲೆಯಲ್ಲಿ ನಾನು ನಿವೃತ್ತಿಯಾಗುತ್ತಿದ್ದೇನೆ’’ ಎಂದು ಇವಾನೊವಿಕ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News