ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಶಶಿಕಲಾ ಅವಿರೋಧ ಆಯ್ಕೆ
ಚೆನ್ನೈ,ಡಿ.29: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾರ ಆಪ್ತೆ ಶಶಿಕಲಾ ನಟರಾಜನ್ ಅವಿರೋಧ ಆಯ್ಕೆಯಾಗಿದ್ದಾರೆ. ಈ ಮೂಲಕ ಪಕ್ಷದ ಉತ್ತರಾಧಿಕಾರಿಯಾಗಿ ಶಶಿಕಲಾ ಆಯ್ಕೆಯಾದಂತಾಗಿದೆ.
ಗುರುವಾರ ಇಲ್ಲಿ ನಡೆದ ಎಐಎಡಿಎಂಕೆ ಪಕ್ಷದ ಕೌನ್ಸಿಲ್ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು. ಶಶಿಕಲಾರನ್ನು ಪಕ್ಷದ ಪ್ರಧಾನಕಾರ್ಯದರ್ಶಿಯಾಗಿ ಆಯ್ಕೆ ಮಾಡುವ ನಿರ್ಣಯಕ್ಕೆ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ, ಲೋಕಸಭೆಯ ಉಪ ಸ್ವೀಕರ್ ಎಂ. ತಂಬಿದೊರೈ ಸಹಿತ ಪಕ್ಷದ ಪ್ರಮುಖ 23 ನಾಯಕರು ಪ್ರಸ್ತಾವನೆ ಮಾಡಿದರು. 2000ಕ್ಕೂ ಅಧಿಕ ಸಾಮಾನ್ಯ ಕೌನ್ಸಿಲ್ ಸದಸ್ಯರು ಶಶಿಕಲಾರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಒಮ್ಮತದಿಂದ ಆಯ್ಕೆ ಮಾಡಲು ಅನುಮೋದಿಸಿದರು.
ಪಕ್ಷದ ನಿಯಮಾನುಸಾರ ಚುನಾವಣೆ ನಡೆಯುವ ತನಕ ಶಶಿಕಲಾ ಅವರ ಪಕ್ಷವನ್ನು ನಿಭಾಯಿಸಲಿದ್ದಾರೆ. ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಶಶಿಕಲಾ ನಟರಾಜನ್‌ಗೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಪ್ರತಿಯನ್ನು ಹಸ್ತಾಂತರಿಸಲಿದ್ದಾರೆ.
ಪಕ್ಷದ ಸಾಮಾನ್ಯ ಕೌನ್ಸಿಲ್ ಸಭೆ ಚೆನ್ನೈನ ಹೊರವಲಯದಲ್ಲಿ ವನಗರಮ್‌ನಲ್ಲಿ ನಡೆದಿದ್ದು, ಸಭೆಯಲ್ಲಿ 14 ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸಭೆ ಆರಂಭಕ್ಕೆ ಮೊದಲು ಜೆ.ಜಯಲಿಲಿತಾರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು.