×
Ad

ಕೆಬಿಸಿಯ ಅಮಿತಾಭ್ ಗಿಂತ ಹೆಚ್ಚು ಮೊತ್ತ ದೂರದರ್ಶನದಿಂದ ಪಡೆದಿದ್ದರು ರಜತ್ ಶರ್ಮ !

Update: 2016-12-29 11:01 IST

ಹೊಸದಿಲ್ಲಿ, ಡಿ. 26 : ಕೌನ್ ಬನೇಗಾ ಕರೋಡ್ ಪತಿ ಬಗ್ಗೆ ಗೊತ್ತಿದೆಯೇ ಎಂದು ಕೇಳಿದರೆ ಹೆಚ್ಚಿನವರು ನಗುವ ಸಾಧ್ಯತೆ ಇದೆ. ಏಕೆಂದರೆ ಬಾಲಿವುಡ್ ನ ಶೆಹೆನ್ ಶಾ ಅಮಿತಾಭ್ ಬಚ್ಚನ್ ನಡೆಸಿಕೊಟ್ಟ ಅತ್ಯಂತ ಖ್ಯಾತ , ಯಶಸ್ವಿ ಷೋ ಅದು. ಆ ಷೋ ಮೂಲಕ ಕೆಲವು ಸ್ಪರ್ಧಿಗಳು ಕೋಟ್ಯಧಿಪತಿ ಗಳಾದರೆ ಇನ್ನು ಹಲವಾರು ಲಕ್ಷಾಧಿಪತಿಗಳಾದರು. ಖುದ್ದು ಅಮಿತಾಭ್ ಷೋಗೆ  ದೊಡ್ಡ ಮೊತ್ತದ ಸಂಭಾವನೆ ಬಾಚಿಕೊಂಡರು. 

ಆದರೆ ನಿಮಗೆ ' ಸಾಥ್ ಸೇ ನೌ ' ಎಂಬ ಷೋ ಗೊತ್ತಿದೆಯೇ ಎಂದು ಕೇಳಿದರೆ ಗೊತ್ತಿದೆ ಎಂದು ಉತ್ತರಿಸುವವರ ಸಂಖ್ಯೆ ಬಹಳ ದೊಡ್ಡದಿರಲು ಸಾಧ್ಯವಿಲ್ಲ. ದೂರದರ್ಶನದಲ್ಲಿ ಅದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ (ಈಗ ಇಂಡಿಯಾ ಟಿವಿಯ ಸಂಪಾದಕ ಹಾಗು ಅಧ್ಯಕ್ಷ ) ರಜತ್ ಶರ್ಮ ನಡೆಸಿಕೊಡುತ್ತಿದ್ದ ಕಾರ್ಯಕ್ರಮ ಅದು. 

ಆದರೆ ವಿಶೇಷ ಏನೆಂದರೆ ಹಲವು ತಿಂಗಳುಗಳ ಕಾಲ ನಡೆದ ಕೌನ್ ಬನೇಗಾ ಕರೋಡ್ ಪತಿ ಎಂಬ ಖಾಸಗಿ ಚಾನಲ್ ನ ವಾಣಿಜ್ಯ ಕಾರ್ಯಕ್ರಮಕ್ಕಾಗಿ ಆ ಚಾನಲ್ ಬಿಗ್ ಬಿ ಯಂತಹ ದೊಡ್ಡ ಸ್ಟಾರ್ ಗೆ ನೀಡಿದ್ದು ಒಂದು ಕೋಟಿ ರೂಪಾಯಿ. ಅದೇ ಸರ್ಕಾರೀ ಸ್ವಾಮ್ಯದ ದೂರದರ್ಶನ ಕೇವಲ ಎರಡೇ ತಿಂಗಳಿಗೆ ರಜತ್ ಶರ್ಮ ಅವರಿಗೆ ಇದಕ್ಕಿಂತ ಹೆಚ್ಚು ಮೊತ್ತ ಪಾವತಿಸಿದೆ !

ವಾರಕ್ಕೆ ಐದು ದಿನ ಪ್ರಸಾರವಾಗುತ್ತಿದ್ದ ಈ ಕಾರ್ಯಕ್ರಮಕ್ಕಾಗಿ  ರಜತ್ ಶರ್ಮ ಅವರಿಗೆ ತಿಂಗಳಿಗೆ 55 ಲಕ್ಷ ರೂಪಾಯಿ ನೀಡಲಾಗುತ್ತಿತ್ತು. ವಿಶೇಷವೇನೆಂದರೆ , ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದ ರಜತ್ ಶರ್ಮ ಈ ಕಾರ್ಯಕ್ರಮಕ್ಕೆ ದೂರದರ್ಶನದ ಎಲ್ಲ ತಾಂತ್ರಿಕ ಸೌಲಭ್ಯಗಳನ್ನೂ ಬಳಸುತ್ತಿದ್ದರು ! 

ಈ ಸಂದರ್ಭದಲ್ಲಿ ಕೇಂದ್ರದಲ್ಲಿ ವಾರ್ತಾ ಮತ್ತು ಪ್ರಸಾರ ಖಾತೆಯ ರಾಜ್ಯ ಸಚಿವರಾಗಿ ಇದ್ದಿದ್ದು ರಜತ್ ಶರ್ಮ ಅವರ ಆಪ್ತ ಮಿತ್ರ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನಲ್ಲಿ ಅವರ ಸಂಗಾತಿ  ಹಾಗು ಕಾಲೇಜಿನಲ್ಲಿ ಅವರ ಸೀನಿಯರ್ ಆಗಿದ್ದ ಅರುಣ್ ಜೇಟ್ಲಿಯವರು. 

2000 ನೇ ಇಸವಿಯಲ್ಲಿ ಹಿರಿಯ ಪತ್ರಕರ್ತ ಹಾಗು ಆಗ ರಾಜ್ಯಸಭಾ ಸದಸ್ಯರಾಗಿದ್ದ ಕುಲದೀಪ್ ನಯ್ಯರ್ ಅವರು ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಎಲ್ಲ ಸುದ್ದಿ ಹಾಗು ಪ್ರಸಕ್ತ ಸನ್ನಿವೇಶಗಳ ಕುರಿತ ಕಾರ್ಯಕ್ರಮಗಳು ಹಾಗು ಅವುಗಳನ್ನು ನಡೆಸಿಕೊಡುವವರಿಗೆ ನೀಡಲಾಗುವ ಸಂಭಾವನೆಯ ವಿವರವನ್ನು ಸದನದಲ್ಲಿ ಕೇಳಿದಾಗ ಈ ಬೆಚ್ಚಿ ಬೀಳಿಸುವ ಸತ್ಯ ಬಯಲಿಗೆ ಬಂದಿದೆ. 

ದಿ ಕಾರವಾನ್ ನಿಯತಕಾಲಿಕದ ಈ ಬಾರಿಯ ಸಂಚಿಕೆಯಲ್ಲಿ ಈ ವಿಷಯವನ್ನು ವರದಿ ಮಾಡಲಾಗಿದೆ. ಇಂಡಿಪೆಂಡೆಂಟ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನ ಕಂಪೆನಿ ಸ್ಥಾಪಿಸಿ ಅದರ ಹೆಸರಿನಲ್ಲೇ ರಜತ್ ಶರ್ಮ ಈ ಭಾರೀ ಮೊತ್ತದ ಸಂಭಾವನೆಯನ್ನು ತೆಗೆದುಕೊಳ್ಳುತ್ತಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News