ಜಯಲಲಿತಾಗೆ ಈ ಮೂರು ಪ್ರತಿಷ್ಠಿತ ಪ್ರಶಸ್ತಿಗಳಿಂದ ಗೌರವಿಸಬೇಕು ಎನ್ನುತ್ತಿದೆ ಎಐಎಡಿಎಂಕೆ !
ಚೆನ್ನೈ, ಡಿ.29 : ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಮರಣಾ ನಂತರ ಪ್ರಪ್ರಥಮ ಬಾರಿಗೆ ಸಭೆ ಸೇರಿದ ಎಐಎಡಿಎಂಕೆ ಜನರಲ್ ಕೌನ್ಸಿಲ್ ಪಕ್ಷದ ದಿವಂಗತ ಅಧಿನಾಯಕಿಗೆ ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ ಅಲ್ಲದೆ ರಾಮನ್ ಮ್ಯಾಗ್ಸೇಸೆ ಪ್ರಶಸ್ತಿ ಹಾಗೂ ನೊಬೆಲ್ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸಲು ನಿರ್ಧರಿಸಿದೆ. ತನ್ನ ನಾಯಕಿಯ ಕಂಚಿನ ಪುತ್ಥಳಿಯನ್ನು ಸಂಸತ್ತಿನಲ್ಲಿ ಸ್ಥಾಪಿಸಬೇಕೆಂಬ ಬೇಡಿಕೆಯನ್ನೂ ಪಕ್ಷ ಇಟ್ಟಿದೆ.
ಗುರುವಾರ ನಡೆದ ಸಭೆಯಲ್ಲಿ ಪಕ್ಷ ಒಟ್ಟು 14 ನಿರ್ಣಯಗಳನ್ನು ಅಂಗೀಕರಿಸಿದ್ದು, ಪಕ್ಷ ಹಾಗೂ ತಮಿಳುನಾಡಿನ ಜನತೆಯ ಕಲ್ಯಾಣಕ್ಕಾಗಿ ಜಯಲಲಿತಾ ಮಾಡಿದ ಹಲವು ತ್ಯಾಗಗಳನ್ನುಸ್ಮರಿಸುತ್ತಾ ಆಕೆಯ ಕೆಲಸಗಳು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಲು ಕ್ರಮ ಕೈಗೊಳ್ಳಲು ನಿರ್ಧರಿಸಿದೆ.
ಸಭೆ ಅಂಗೀಕರಿಸಿದ ಇತರ ನಿರ್ಣಯಗಳೆಂದರೆ, ಜಯಲಲಿತಾ ನಿಧನದ ಹಿನ್ನೆಲೆಯಲ್ಲಿ ಹೊಸ ಪ್ರಧಾನ ಕಾರ್ಯದರ್ಶಿಯನ್ನು ನೇಮಿಸಬೇಕು, ಆಕೆಯ ಜನ್ಮ ದಿನವನ್ನು ರೈತರ ದಿನವೆಂದು ಘೋಷಿಸಬೇಕು, ಎಲ್ಲರಿಗೂ ಪೌಷ್ಠಿಕಾಂಶ ಭರಿತ ಆಹಾರ ದೊರೆಯಲು ಯಶಸ್ವಿಯಾದ ಆಕೆಗೆ ಈ ನಿಟ್ಟಿನಲ್ಲಿ ನೊಬೆಲ್ ಪ್ರಶಸ್ತಿ ನೀಡಬೇಕು ಹಾಗೂ ಎಂಜಿಆರ್ ಅವರ 100ನೇ ಜನ್ಮ ದಿನಾಚರಣೆಯನ್ನು ಮಕ್ಕಲ್ ಪಾನಿಸಾಮಾಜಿಕ ಕಾರ್ಯ ದಿನ ಎಂದು ಘೊಷಿಸಬೇಕು.
ಪುರಚ್ಚಿ ತಳೈವಿ ಅಮ್ಮ ತೋರಿಸಿದ ಹಾದಿಯಂತೆ ಪಕ್ಷವು ಗೌರವಾನ್ವಿತ ಚಿನ್ನಮ್ಮ ಅವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುವುದು ಎಂಬ ನಿರ್ಣಯವನ್ನೂ ಅಂಗೀಕರಿಸಲಾಗಿದೆ.