ಮೀನುಗಾರಿಕಾ ಬಂದರಿನಲ್ಲಿ ಸಂಚಾರ ಅವ್ಯವಸ್ಥೆ; ಹೆಚ್ಚುತ್ತಿರುವ ಅಪಘಾತಗಳು
ಮಂಗಳೂರು, ಡಿ.29: ನಗರದ ಮೀನುಗಾರಿಕಾ ಬಂದರಿನಲ್ಲಿ ವಾಹನ ದಟ್ಟಣೆಯಿಂದಾಗಿ ಸಂಚಾರಕ್ಕೆ ಸರಿಯಾದ ವ್ಯವಸ್ಥೆ ಇಲ್ಲದೆ ಅಪಘಾತಗಳು ಮರುಕಳಿಸುತ್ತಿದ್ದು, ಕೆಲವೇ ತಿಂಗಳ ಅಂತರದಲ್ಲಿ ಇಬ್ಬರು ಬಲಿಯಾಗಿದ್ದಾರೆ. ಇಲ್ಲಿ ಸಣ್ಣಪುಟ್ಟ ಅಪಘಾತಗಳಿಗೆ ಲೆಕ್ಕವಿಲ್ಲ ಎನ್ನುವ ಮೀನುಗಾರರು, ಈ ಬಗ್ಗೆ ಸಂಬಂಧ ಪಟ್ಟ ಇಲಾಖೆ ತುರ್ತಾಗಿ ಗಮನ ಹರಿಸಿ, ವಾಹನ ಮತ್ತು ಪಾದಚಾರಿಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
ಮೀನುಗಾರಿಕಾ ಧಕ್ಕೆಯ ಒಳಗೆ ವಾಹನ ಸಂಚಾರಕ್ಕೆ ಎರಡು ದಶಕಗಳ ಹಿಂದೆ ಇದ್ದ ಇಕ್ಕಟ್ಟಾದ ಎರಡು ರಸ್ತೆಗಳು ಇಂದು ಕೂಡ ಹಾಗೆಯೇ ಉಳಿದುಕೊಂಡಿದೆ. ಅದನ್ನು ವಿಸ್ತರಿಸುವುದಾಗಲಿ ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಈವರೆಗೆ ಕ್ರಮ ಜರಗಿಲ್ಲ. ಹಿಂದೆ ಧಕ್ಕೆಯಲ್ಲಿ 500 ಬೋಟ್‌ಗಳು ಇದ್ದ ಸಂದರ್ಭದಲ್ಲಿ ಈ ರಸ್ತೆಗಳು ಸರಿಹೊಂದುತ್ತಿದ್ದವು. ಆದರೆ, ಈಗ ಸುಮಾರು 2000 ಬೋಟುಗಳು ಇದ್ದರೂ, ವ್ಯವಸ್ಥೆಯಲ್ಲಿ ಮಾತ್ರ ಯಾವುದೇ ಬದಲಾವಣೆಗಳಾಗಿಲ್ಲ ಎಂದು ಮೀನುಗಾರ ವ್ಯಾಪಾರಸ್ಥರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಬೋಟುಗಳ ಸಂಖ್ಯೆ ಹೆಚ್ಚಳದೊಂದಿದೆ ಮೀನು ವ್ಯಾಪಾರಸ್ಥರ ಸಂಖ್ಯೆಯೂ ಹೆಚ್ಚಾಗಿದೆ. ವಾಹನಗಳ ಪಾರ್ಕಿಂಗ್ ಕೊರತೆ ಮತ್ತು ಸುಗಮ ಸಂಚಾರದ ತೊಡಕುಗಳಿಂದಾಗಿ ಬೋಟುಗಳಿಂದ ಮೀನುಗಳನ್ನು ಇಳಿಸಿ ವಾಹನಗಳಿಗೆ ಹೇರುವುದೇ ಕಷ್ಟವಾಗಿದೆ. ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರ, ಆರು ಚಕ್ರಗಳು ಹೀಗೆ ಹಲವಾರು ವಾಹನಗಳನ್ನು ಮೀನುಗಳ ಲೋಡಿಂಗ್ ಮತ್ತು ಅಲ್‌ಲೋಡಿಂಗ್‌ಗಾಗಿ ರಸ್ತೆ ಬದಿಯಲ್ಲೇ ನಿಲ್ಲಿಸಬೇಕಾಗಿದೆ. ಇಂತಹ ವಾಹನಗಳ ಸಂಚಾರದಿಂದಾಗಿ ದ್ವಿಚಕ್ರ ವಾಹನಗಳಲ್ಲಿ ಮೀನುಗಳನ್ನು ಕೊಂಡೊಯ್ದು ಮನೆ-ಮನೆಗೆ ಮಾರಾಟ ಮಾಡುವ ಚಿಕ್ಕ ವ್ಯಾಪಾರಿಗಳಿಗೆ ಮತ್ತು ಪಾದಚಾರಿಗಳಿಗೆ ಸಮಸ್ಯೆ ತಂದೊಡ್ಡಿದೆ. ಕೆಲವೊಮ್ಮೆ ವಾಹನ ಚಾಲಕರ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯು ಕೆಲವರನ್ನು ಬಲಿ ಪಡೆದುಕೊಂಡಿವೆ ಎನ್ನುತ್ತಾರೆ ಕೆಲವು ಮೀನುಗಾರರು.
ಇಬ್ಬರನ್ನು ಬಲಿ ಪಡೆದ ಅವ್ಯವಸ್ಥೆ ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಬಂದರಿನ ಧಕ್ಕೆಯಲ್ಲಿ ವಾಹನ ಅಪಘಾತದಲ್ಲಿ ಇಬ್ಬರು ಬಲಿಯಾಗಿದ್ದಾರೆ. ಡಿ.22ರಂದು ಬೆಳಗ್ಗ 7:30ಕ್ಕೆ ಮೀನು ವ್ಯಾಪಾರಿ ಮೋರ್ಗನ್ಸ್‌ಗೇಟ್ ನಿವಾಸಿ ಇಸ್ಮಾಯೀಲ್ ಬೋಳಾರ (63) ಎಂಬವರು ವಾಹನ ಅಪಘಾತದಲ್ಲಿ ಮೃತಪಟ್ಟಿದ್ದರು. ಮೀನುಗಾರಿಕಾ ಬಂದರಿನ ಸಹಾಯ ನಿರ್ದೇಶಕ ಕಚೇರಿ (ಶ್ರೇಣಿ-1) ಎದುರಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈಚರ್ ವಾಹನವು ಇವರನ್ನು ಒರೆಸಿಕೊಂಡೇ ಹಾದುಹೋಗಿತ್ತು. ಪರಿಣಾಮವಾಗಿ ವಾಹನದ ಹಿಂಬದಿಯ ಬಾಗಿಲಿನ ಚೈನ್ ಇವರ ಬಟ್ಟೆಗೆ ಸಿಲುಕಿ ಎಳೆದಾಟದಲ್ಲಿ ತೀವ್ರ ಗಾಯಗೊಂಡು ಸಾವನ್ನಪ್ಪಿದ್ದರು. ಇನ್ನೊಂದು ಘಟನೆ ನಾಲ್ಕು ತಿಂಗಳ ಹಿಂದೆ ಅದೇ ರಸ್ತೆಯ ಮೆಟ್ರೋ ಫಿಶ್ ಹ್ಯಾಂಡ್‌ಲಿಂಗ್ ಸೆಂಟರ್ ಫಾರ್ ಎಕ್ಸ್‌ಪೋರ್ಟ್ ಬಳಿ ನಡೆದಿತ್ತು. ಈ ಘಟನೆಯಲ್ಲಿ ಎಮ್ಮೆಕೆರೆ ಪಾದೆಕಲ್ ನಿವಾಸಿ ಹರೀಶ್ ಎಂಬವರು ಎರಡು ವಾಹನಗಳ ಮಧ್ಯಭಾಗದಲ್ಲಿ ಸಿಲುಕಿ ಮೃತಪಟ್ಟಿದ್ದರು. ಇದಲ್ಲದೆ, ವಾಹನಗಳ ಢಿಕ್ಕಿ, ಸಣ್ಣ ಪುಟ್ಟ ಅಪಘಾತಗಳಿಂದ ಕೆಲವರು ಆಸ್ಪತ್ರೆಗಳಿಗೆ ದಾಖಲಾಗಿದ್ದೂ ಇದೆ ಎಂದು ಮೀನು ವ್ಯಾಪಾರಸ್ಥರು ನೆನಪಿಸಿಕೊಳ್ಳುತ್ತಾರೆ.
ಸದ್ಯಕ್ಕೆ ಪರಿಹಾರ ಏನು?
ಮೀನುಗಾರರು ಹೇಳುವ ಪ್ರಕಾರ ಮುಂಜಾನೆ 5 ಗಂಟೆಯಿಂದಲೇ ಹಳೆ ಬಂದರಿನಲ್ಲಿ ಮೀನುಗಾರಿಕೆಯ ಚಟುವಟಿಕೆ ಪ್ರಾರಂಭಗೊಳುತ್ತದೆ. ಧಕ್ಕೆಯಲ್ಲಿ ಲಂಗರು ಹಾಕಿದ ಬೋಟುಗಳಲ್ಲಿ ಎರಡು ರೀತಿಯಲ್ಲಿ ಮೀನು ವ್ಯಾಪಾರ ನಡೆಯುತ್ತದೆ. ಒಣ ಮೀನು ವ್ಯಾಪಾರಸ್ಥರು ಮತ್ತು ಹಸಿಮೀನು ವ್ಯಾಪಾರಸ್ಥರು. ತಾಜಾತನವನ್ನು ಕಳೆದುಕೊಂಡ ಮೀನುಗಳು ಫಿಶ್‌ಮಿಲ್, ಫ್ಯಾಕ್ಟರಿ, ಮತ್ತು ಒಣಗಿಸಲು ಹೋಗುವಂತಹವುಗಳು. ಇಂತಹ ಮೀನುಗಳನ್ನು ಫಿಶ್‌ಮಿಲ್‌ಗಳಿಗೆ ಸರಬರಾಜು ಮಾಡುವ ವ್ಯಾಪಾರಸ್ಥರು ಅಥವಾ ಒಣ ಮೀನು ವ್ಯಾಪಾರಸ್ಥರು ಖರೀದಿಸುತ್ತಾರೆ. ಇವು ಸ್ಥಳೀಯವಾಗಿ ಸರಬರಾಜಾಗುವ ಮೀನುಗಳಾಗಿವೆ. ಈ ಮೀನು ವ್ಯಾಪಾರಸ್ಥರು ಮೀನುಗಳನ್ನು ಯಾವ ಸಮಯದಲ್ಲೂ ಖರೀದಿಸಬಹುದು. ಆದರೆ, ಹಸಿ ಮೀನು ವ್ಯಾಪಾರಸ್ಥರು ಯಾವ ಸಮಯದಲ್ಲೂ ಖರೀದಿಸುವಂತಿಲ್ಲ. ಹಸಿ ಮೀನು ವ್ಯಾಪಾರಸ್ಥರು ತಾವು ಖರೀದಿಸಿದ ಮೀನುಗಳ ತಾಜಾತನವನ್ನು ಕಾಪಾಡಲು ತ್ವರಿತವಾಗಿ ಮಂಜುಗಡ್ಡೆಯಲ್ಲಿ ಸಂಗ್ರಹಿಸಿ ಅಷ್ಟೇ ಬೇಗನೆ ದೂರದ ಪ್ರದೇಶಗಳಿಗೆ ಸರಬರಾಜು ಮಾಡುತ್ತಾರೆ. ಕೇರಳ, ತಮಿಳುನಾಡು ಮತ್ತು ಕರ್ನಾಟಕದ ಬೆಂಗಳೂರು ಮತ್ತಿತರೆಡೆಗಳಿಗೆ ಈ ಮೀನುಗಳು ಹೆಚ್ಚಾಗಿ ಪೂರೈಕೆಯಾಗುತ್ತವೆ. ಆದ್ದರಿಂದ ಖರೀದಿ ಸಮಯದ ವಿಷಯದಲ್ಲಿ ಹಸಿ ಮೀನು ವ್ಯಾಪಾರಸ್ಥರಿಗೆ ಪ್ರಥಮ ಆದ್ಯತೆ ನೀಡಬೇಕಾಗುತ್ತದೆ. ಒಟ್ಟಾರೆ ಈ ಎರಡೂ ವರ್ಗದ ಮೀನು ವ್ಯಾಪಾರಸ್ಥರು ಒಂದೇ ಸಮಯದಲ್ಲಿ ಧಕ್ಕೆಯಲ್ಲಿ ಸೇರಿರುವುದರಿಂದ ವಾಹನ ದಟ್ಟಣೆಗಳು ಹೆಚ್ಚಾಗಿ ಜನಜಂಗುಳಿ ಪ್ರಾರಂಭವಾಗುತ್ತಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಸದ್ಯದ ಪರಿಸ್ಥಿತಿಯಲ್ಲಿ ಹಸಿ ಮೀನು ವ್ಯಾಪಾರಸ್ಥರಿಗೆ ತಾವು ಖರೀದಿಸುವ ಮೀನುಗಳಿಗೆ ತಾಜಾತನ ಕಾಪಾಡಬೇಕಾದ ಅಗತ್ಯವಿರುವುದರಿಂದ ಬೆಳಗ್ಗಿನ ಸಮಯದಲ್ಲಿ ಅಂದರೆ, ಮುಂಜಾನೆ 5 ಗಂಟೆಯಿಂದ 9:30ರವರೆಗೆ ಬೋಟಂಗಳಿಂದ ಮೀನು ಅನ್‌ಲೋಡಿಂಗ್‌ಗೆ ಅವಕಾಶ ಮಾಡಿಕೊಟ್ಟು 9:30ರ ಬಳಿಕ ಒಣ ಮೀನು ವ್ಯಾಪಾರಸ್ಥರಿಗೆ ಅನುವು ಮಾಡಿಕೊಟ್ಟರೆ ಇಂತಹ ವಾಹನ ದಟ್ಟಣೆಯಿಂದಾಗುವ ಅನಾಹುತವನ್ನು ತಪ್ಪಿಸಬಹುದು ಎನ್ನುವುದು ಮೀನು ವ್ಯಾಪಾರಸ್ಥರ ಅಭಿಮತ.
ಇನ್ನೊಂದು ಅಂಶವೆಂದರೆ, ಧಕ್ಕೆಯ ತುಸು ದೂರದ ಹೊಗೆ ಬಝಾರ್‌ನಲ್ಲಿ ನಿರ್ಮಾಣಗೊಂಡಿರುವ ನೂತನ ಧಕ್ಕೆಯ ಉಪಯೋಗವು ಕೇವಲ ಮಂಜುಗಡ್ಡೆಯ ಅನ್‌ಲೋಡಿಂಗ್‌ಗೆ ಸೀಮಿತಗೊಂಡಂತಿದೆ. ಹಸಿ ಮತ್ತು ಫ್ಯಾಕ್ಟರಿಗೆ ಪೂರೈಕೆಯಾಗುವ ಮೀನುಗಳನ್ನು ಹೊಂದಿರುವ ಬೋಟುಗಳು ಹಸಿ ಮೀನುಗಳನ್ನು ಹಳೆಯ ಧಕ್ಕೆಯಲ್ಲಿ ಖಾಲಿ ಮಾಡಿ, ಫ್ಯಾಕ್ಟರಿ ಮತ್ತು ಒಣಗಿಸಲು ಪೂರೈಕೆಯಾಗುವ ಮೀನುಗಳನ್ನು ಹೊಗೆಬಝಾರ್‌ನ ನೂತನ ಧಕ್ಕೆಯಲ್ಲಿ ಅನ್‌ಲೋಡಿಂಗ್ ಅವಕಾಶ ಮಾಡಿಕೊಟ್ಟರೆ ವಾಹನ ದಟ್ಟಣೆ, ಜನಸಂಚಾರ ಕಡಿಮೆ ಮಾಡಬಹುದು. ಹೊಗೆಬಝಾರ್‌ಗೆ ತೆರಳಬೇಕಾದ ವಾಹನಗಳು ನೇರವಾಗಿ ಹಳೆಯ ಧಕ್ಕೆಯ ಪ್ರವೇಶದ್ವಾರವನ್ನು ಪ್ರವೇಶಿಸದೆ, ಹೊರಗಿನಿಂದಲೇ ರೊಸಾರಿಯೊ ಸ್ಕೂಲ್ ಅಥವಾ ಮೂಡುಶೆಡ್ ಮಾರ್ಗವಾಗಿ ಚಲಿಸಲು ಅನುವು ಮಾಡಿಕೊಡಬೇಕು. ಹೀಗಾದರೆ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗಾದರೂ ಪರಿಹರಿಸಬಹುದು. ಒಟ್ಟಾರೆ ಈ ಪ್ರಯೋಗಕ್ಕೆ ಎರಡೂ ಬಗೆಯ ಮೀನು ವ್ಯಾಪಾರಸ್ಥರ ಪರಸ್ಪರ ತಿಳುವಳಿಕೆ ಮತ್ತು ಹೊಂದಾಣಿಕೆ ಅಗತ್ಯವಾಗಿದೆ.
ಅಪಾಯ ಅರಿತು ಕ್ರಮ ಕೈಗೊಳ್ಳಲಿ
ಬೋಟುಗಳು ಹೆಚ್ಚಾದಂತೆ ವ್ಯಾಪಾರಿಗಳ ಸಂಖ್ಯೆ ಹೆಚ್ಚಾಗಿದೆ. ಆದರೆ, ವ್ಯವಸ್ಥೆ ಸರಿಯಾಗಿಲ್ಲ. ವಾಹನಗಳ ನಿಲುಗಡೆಗೆ ಸ್ಥಳಾವಕಾಶದ ಕೊರತೆಯಿಂದಾಗಿ ಕೆಲವೊಮ್ಮೆ ಕೆಲವು ಗಂಟೆಗಳ ಕಾಲ ಮೀನುಗಳು ಬೋಟುಗಳಲ್ಲೇ ಬಾಕಿಯಾಗುತ್ತವೆ. ಇಕ್ಕಟ್ಟಿನ ರಸ್ತೆಯಲ್ಲಿ ವಾಹನಗಳು ಪಾರ್ಕ್ ಮಾಡುವುದೇ ಕಷ್ಟ. ಇಕ್ಕಟ್ಟಿನ ರಸ್ತೆಯಲ್ಲಿ ವಾಹನಗಳನ್ನು ಹಿಂದೆ ಪಡೆಯುವಾಗ ಇಲ್ಲವೇ ಮುಂದೆ ಚಲಿಸುವಾಗ ಸಣ್ಣ ಪುಟ್ಟ ಅಪಘಾತವಾಗುವುದು ಮಾಮೂಲಿಯಾಗಿದೆ. ವಾಹನ ಸಂಚರಿಸುವ ಇದೇ ರಸ್ತೆಯಲ್ಲಿ ಕೆಲವು ತಿಂಗಳ ನಡುವೆ ಇಬ್ಬರು ಬಲಿಯಾಗಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ಕ್ರಮ ಕೈಗೊಳ್ಳಲಿ.
-ಮಜೀದ್ ಪಿ.ಪಿ., ಮೀನು ವ್ಯಾಪಾರಿ
ಬೋಟುಗಳ ಸಂಖ್ಯೆ ಹೆಚ್ಚಾದರೂ ವ್ಯವಸ್ಥೆ ಸರಿಯಾಗಿಲ್ಲ
ಧಕ್ಕೆಯಲ್ಲಿ ಸುಮಾರು 2000ದಷ್ಟು ಬೋಟುಗಳಿವೆ. ಈ ಬೋಟುಗಳ ಮೀನು ಸಾಗಾಟಕ್ಕೆ ಬೆಳಗ್ಗೆ 6 ಗಂಟೆಯಿಂದಲೇ ವಾಹನಗಳ ಸಾಲು ಪ್ರಾರಂಭಗೊಳ್ಳುತ್ತದೆ. ಇಕ್ಕಟ್ಟಾದ ರಸ್ತೆ, ರಸ್ತೆ ಬದಿಯಲ್ಲೇ ವಾಹನಗಳನ್ನು ನಿಲ್ಲಿಸಿ ಮೀನುಗಳ ಲೋಡಿಂಗ್, ಅನ್‌ಲೋಡಿಂಗ್ ಮಾಡಬೇಕಾಗುತ್ತದೆ. ಇದರ ನಡುವೆ ವಾಹನಗಳ ರ್ಯಾಶ್ ಡ್ರೈವಿಂಗ್ ಬೇರೆ. ಇದರಿಂದ ಪಾದಚಾರಿಗಳಿಗೆ ನಿರ್ಭೀತಿಯಿಂದ ನಡೆದಾಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು.
-ಕಬೀರ್ ಕೆಬಿಆರ್, ಮೀನು ವ್ಯಾಪಾರಿ
ಪರ್ಯಾಯ ವ್ಯವಸ್ಥೆ ಬೇಕು
ಫಿಶ್‌ಮಿಲ್‌ಗಳಿಗೆ ಸರಬರಾಜು ಮಾಡುವ ಮೀನು ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಹಸಿ ಮತ್ತು ಫಿಶ್‌ಮಿಲ್ ಮೀನು ವ್ಯಾಪಾರಿಗಳು ಒಂದೇ ಅವಧಿಯಲ್ಲಿ ಧಕ್ಕೆಯಲ್ಲಿ ಸೇರುವುದರಿಂದ ಈ ಸಮಸ್ಯೆ ಉದ್ಭವವಾಗಿದೆ. ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಮಾರ್ಗದಲ್ಲಿ ನಡೆದಾಡಲೂ ಕಷ್ಟವಾಗತ್ತದೆ.