×
Ad

ಸಕ್ಲೇನ್‌ಗೆ ‘ತನ್ನದೇ ಶೈಲಿ’ಯಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದ ಸೆಹ್ವಾಗ್

Update: 2016-12-29 14:59 IST

ಹೊಸದಿಲ್ಲಿ, ಡಿ.29: ಭಾರತದ ಮಾಜಿ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನ ಆಕ್ರಮಣಕಾರಿ ಶೈಲಿಯ ಬ್ಯಾಟಿಂಗ್‌ನ ಮೂಲಕ ಹೊಸ ಕ್ರಾಂತಿ ಸೃಷ್ಟಿಸಿದ್ದರು. ಅಬ್ಬರದ ಬ್ಯಾಟಿಂಗ್‌ನ ಮೂಲಕ ಟೆಸ್ಟ್ ಕ್ರಿಕೆಟ್‌ಗೂ ಹೆಚ್ಚು ಅಭಿಮಾನಿಗಳನ್ನು ಆಕರ್ಷಿಸಿದ್ದರು. ಇದೀಗ ಅವರು ವಿಭಿನ್ನ ಟ್ವಿಟರ್‌ನ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಗುರುವಾರ ಹುಟ್ಟುಹಬ್ಬ ಆಚರಿಸಿಕೊಂಡಿರುವ 40ರ ಹರೆಯದ ಪಾಕ್‌ನ ಮಾಜಿ ಆಫ್-ಸ್ಪಿನ್ನರ್ ಸಕ್ಲೇನ್ ಮುಶ್ತಾಕ್‌ಗೆ ಸೆಹ್ವಾಗ್ ತನ್ನ ಟ್ವಿಟರ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡು ವಿಭಿನ್ನವಾಗಿ ಶುಭಾಶಯ ಕೋರಿದ್ದಾರೆ.

2009ರ ಮಾ.29 ರಂದು ಪಾಕಿಸ್ತಾನದ ಮುಲ್ತಾನ್‌ನಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ಸಕ್ಲೇನ್ ಮುಶ್ತಾಕ್ ಬೌಲಿಂಗ್‌ನಲ್ಲಿ ಸಿಕ್ಸರ್ ಸಿಡಿಸಿ ತ್ರಿಶತಕ ಪೂರೈಸಿದ್ದ ವಿಡಿಯೋವನ್ನು ಸೆಹ್ವಾಗ್ ಅವರು ಮುಶ್ತಾಕ್‌ಗೆ ಕಳುಹಿಸಿಕೊಟ್ಟಿದ್ದಾರೆ.

‘‘ಪ್ರೀತಿಯ ಸಕ್ಲೇನ್ ಮುಶ್ತಾಕ್‌ಗೆ ಹುಟ್ಟುಹಬ್ಬದ ಶುಭಾಶಯಗಳು. ನೀವು ಚೆನ್ನಾಗಿರಿ. ತ್ರಿಶತಕದ ಸವಿನೆನಪಿಗಾಗಿ ನಿಮಗೆ ಕೃತಜ್ಞತೆಗಳು. ಈ ವಿಡಿಯೋವನ್ನು ನೋಡಿ ಆನಂದಿಸಿ’ ಎಂದು ಟ್ವೀಟ್ ಮಾಡಿದ್ದಾರೆ.

ಸೆಹ್ವಾಗ್ ಶೇರ್ ಮಾಡಿರುವ ವೀಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ಟ್ವಿಟರ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News