×
Ad

ಶರಿಯತ್ ನಲ್ಲಿ ಸರ್ಕಾರದ ಹಸ್ತಕ್ಷೇಪ ಸಲ್ಲದು : ಎಂ.ಎ. ಗಫೂರ್

Update: 2016-12-29 18:23 IST

ಭಟ್ಕಳ , ಡಿ.29: ದೇಶದ ಮುಸ್ಲೀಮರು ಶರೀಯತ್ ಕಾನೂನಿನಂತೆ ತಮ್ಮ ಕೌಟುಂಬಿಕ ಜೀವನ ನಡೆಸುತ್ತಿದ್ದು , ಇದರಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡುತ್ತಿರುವುದು ಸರಿಯಲ್ಲ ಎಂದು ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದರು. 

ಅವರು ಬುಧವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಈ ವಿಷಯ ತಿಳಿಸಿದರು.

ಇಲ್ಲಿನ ಮುಸ್ಲಿಂ ಸಮುದಾಯ ಶಾಂತಿ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಮುಸ್ಲೀಮರ ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಕೇಂದ್ರ ಸರಕಾರದ ಹಸ್ತಕ್ಷೇಪ ಸಲ್ಲದು ಎಂದ ಹೇಳಿದರು.

ತ್ರಿವಳಿ ತಲಾಖ್ ನಿರ್ಬಂಧದ ಕುರಿತಂತೆ, ಯಾರೂ ಸುಲಭವಾಗಿ ತಲಾಖ್‌ನ್ನು ನೀಡುವಂತಿಲ್ಲ. ಅದಕ್ಕೂ ಕಟ್ಟಳೆ ಇದೆ. ತಪ್ಪು ಮಾಡಿದವರನ್ನು ತಿದ್ದುವ ಕೆಲಸವನ್ನು ಜಮಾಅತ್‌ಗಳು ಮಾಡುತ್ತವೆ. ಒಡೆದ ಮನಸ್ಸುಗಳನ್ನು ಒಟ್ಟುಗೂಡಿಸುತ್ತವೆ ಎಂದು ತಿಳಿಸಿದರು.

ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಮುಸ್ಲೀಮ್, ಕ್ರೈಸ್ತ, ಜೈನ್, ಪಾರ್ಸಿ ಸೇರಿದಂತೆ ಎಲ್ಲ ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಸ್ವಾವಲಂಬನೆ, ಅರಿವು, ಶ್ರಮಶಕ್ತಿ, ಗಂಗಾಕಲ್ಯಾಣ ಸೇರಿದಂತೆ ಹತ್ತಾರು ಯೋಜನೆಗಳನ್ನು ಜಾರಿಗೆ ತಂದು ಅನುದಾನವನ್ನು ಒದಗಿಸುತ್ತಿದೆ. ಕಳೆದ ವರ್ಷ 5 ಕೋಟಿ 76 ಲಕ್ಷ ರುಪಾಯಿ ಅನುದಾನವನ್ನು ನೀಡಲಾಗಿದೆ.

ರಾಜ್ಯ ಸರಕಾರ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಅಲ್ಪಸಂಖ್ಯಾತರ ನಿಗಮವೂ ಸೇರಿಂದತೆ 5 ವಿವಿಧ ವಿಭಾಗಗಳ ಮೂಲಕ 1340 ಕೋಟಿ ರೂಪಾಯಿ ಒದಗಿಸಿದೆ. ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ನಿಗದಿತ 399 ಫಲಾನುಭವಿಗಳ ಗುರಿಯನ್ನು ಮೀರಿ 740 ಕುಟುಂಬಗಳಿಗೆ ಸಹಾಯಧನವನ್ನು ನೀಡಲಾಗಿದೆ. ಮುಸ್ಲೀಮ್ ಸಂಘ ಸಂಸ್ಥೆಗಳು, ಮುಸ್ಲೀಮ್ ಸ್ಪೋರ್ಟ್ಸ ಕ್ಲಬ್‌ಗಳು ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ನಮ್ಮೊಂದಿಗೆ ಕೈ ಜೋಡಿಸಬೇಕು ಎಂದು ತಿಳಿಸಿದರು.

ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ್ ನಾಯ್ಕ, ಭಟ್ಕಳ ಪುರಸಭಾ ಅಧ್ಯಕ್ಷ ಸಾದಿಕ್ ಮಟ್ಟಾ, ಜಾಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಅಬ್ದರ್ರಹೀಮ್, ಮಜೀದ್ ಗುಳ್ಮಿ, ಫಯಾಜ್‌ಮುಲ್ಲಾ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News