ಆರೋಪ ನಿರಾಧಾರ: ಶಾಸಕ ಬಾವ
ಮಂಗಳೂರು, ಡಿ. 28: ಕ್ಷೇತ್ರದಲ್ಲಿನ ತಾನು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಅವರು ಮಾಡಿರುವ ಆರೋಪವು ನಿರಾಧಾರವಾಗಿದೆ ಎಂದು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊದಿನ್ ಬಾವ ಸ್ಪಷ್ಟಪಡಿಸಿದ್ದಾರೆ.
ಮನಪಾ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘‘ಮೊದಿನ್ ಬಾವರ ಅವಧಿಯಲ್ಲಿ ಯಾವುದೇ ಅಭಿವೃದ್ದಿ ಕಾಮಗಾರಿಗಳು ಆಗಿಲ್ಲ. ಈಗ ನಡೆಯುತ್ತಿರುವುದು ತನ್ನ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳು’’ ಎಂದು ಕೃಷ್ಣ ಪಾಲೆಮಾರ್ ಅವರು ಸುಳ್ಳು ಹೇಳಿಕೆ ನೀಡಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಅಲ್ಲದೆ, ನನ್ನ ಅವಧಿಯಲ್ಲಿ ಆಗಿರುವ ಅಭಿವೃದ್ದಿ ಕಾಮಗಾರಿಗಳಿಗೆ ಮಂಜೂರಾದ ಅನುದಾನದಲ್ಲಿ ಶೇ. 15ರಷ್ಟು ಕಮಿಷನ್ ಪಡೆದಿರುತ್ತಾರೆ ಎಂದು ನನ್ನ ಮೇಲೆ ಮಾಡಿರುವ ಆರೋಪ ನಿರಾಧಾರವಾಗಿದೆ ಎಂದು ಬಾವ ಹೇಳಿದರು.
ಒಂದೆಡೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ನಡೆದಿಲ್ಲ ಎಂದು ಹೇಳಿಕೆ ನೀಡಿ, ಮಗದೊಮ್ಮೆ ಅಭಿವೃದ್ದಿ ಕಾಮಗಾರಿಗಳಿಗೆ ಮಂಜೂರಾಗಿರುವ ಅನುದಾನದಲ್ಲಿ ಶೇ. 15ರಷ್ಟು ಕಮಿಷನ್ ಪಡೆದಿದ್ದಾರೆ ಎಂದು ಹೇಳುವ ಮೂಲಕ ನನ್ನ ಅಭಿವೃದ್ದಿ ಕಾರ್ಯಗಳನ್ನು ಮಾಜಿ ಸಚಿವರು ಒಪ್ಪಿಕೊಂಡಂತಾಗಿದೆ. ಆದ್ದರಿಂದ ಈ ರೀತಿಯ ಗೊಂದಲಕಾರಿ ಹೇಳಿಕೆಗಳನ್ನು ನೀಡುವ ಬದಲು ಚರ್ಚೆಗೆ ಬರಲಿ ಎಷ್ಟು ಅಭಿವೃದ್ದಿ ಕೆಲಸಗಳು ನಡೆದಿವೆ ಎಂಬುದರ ಬಗ್ಗೆ ವಿವರ ನೀಡುತ್ತೇನೆ ಎಂದು ಶಾಸಕರು ಸವಾಲು ಹಾಕಿದರು.
ನನ್ನ ಅವಧಿಯಲ್ಲಿ ರಾಜ್ಯದಲ್ಲೇ ಅತ್ಯಧಿಕ 24 ಹಿಂದುಳಿದ ವರ್ಗಗಳ ಸಮುದಾಯ ಭವನಗಳು ಹಾಗೂ 22 ಅಂಬೇಡ್ಕರ್ ಭವನಗಳನ್ನು ಪರಿಶಿಷ್ಟ ಸಮುದಾಯಗಳಿಗೆ ಮಂಜೂರು ಮಾಡಿಸಿದ್ದೇನೆ. ಮುಖ್ಯಮಂತ್ರಿಗಳ ನಿಧಿಯಿಂದ ಕ್ಷೇತ್ರದ 600ಕ್ಕೂ ಅಧಿಕ ಮಂದಿ ಫಲಾನುಭವಿಗಳಿಗೆ 4 ಕೋಟಿ ರೂ. ಮೊತ್ತದ ಚೆಕ್‌ಗಳ ವಿತರಣೆ ಮಾಡಿದ್ದೇನೆ ಎಂದು ಮೊದಿನ್ ಬಾವ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮೇಯರ್ ಹರಿನಾಥ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದಶಿ ನಝೀರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.