×
Ad

ಅಧಿಕ ಭಾರದ ಜಲ್ಲಿಕಲ್ಲು ಸಾಗಿಸುತ್ತಿದ್ದ ಟಿಪ್ಪರ್‌ಗಳಿಗೆ ಬೆಳ್ಳೆಚ್ಚಾರು ಗ್ರಾಮಸ್ಥರಿಂದ ತಡೆ

Update: 2016-12-29 18:59 IST

ಮೂಡುಬಿದಿರೆ , ಡಿ.29  : ಇರುವೈಲ್-ಬೆಳ್ಳೆಚ್ಚಾರು ರಸ್ತೆಯಲ್ಲಿ ಅಧಿಕ ಬಾರದ ಜಲ್ಲಿಕಲ್ಲು ತುಂಬಿಸಿ ಅಜಾಗರೂಕತೆ ಮತ್ತು ಅತೀ ವೇಗದಿಂದ ಚಾಲನೆ ಮಾಡುತ್ತಾ ಲೋಕೋಪಯೋಗಿ ರಸ್ತೆಯನ್ನು ಹಾಳುಗೆಡವುತ್ತಿರುವ ಟಿಪ್ಪರ್‌ಗಳನ್ನು ಮಿಜಾರು-ಬಡಗ ಎಡಪದವಿನ ಗ್ರಾಮಸ್ಥರು ತಡೆದು ನಿಲ್ಲಿಸಿ ಎಚ್ಚರಿಕೆ ನೀಡಿದ ಘಟನೆ ಗುರುವಾರ ಬೆಳ್ಳೆಚ್ಚಾರಿನಲ್ಲಿ ನಡೆದಿದೆ.

  ಇರುವೈಲು ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 6ರಿಂದ 7ರಷ್ಟು ಕ್ರಶರ್‌ಗಳಿದ್ದು , ಇಲ್ಲಿಂದ ಸುಮಾರು 50 ಲಾರಿಗಳು ದಿನವೊಂದಕ್ಕೆ 20 ಬಾರಿ ಜಲ್ಲಿಗಳನ್ನು ತುಂಬಿಸಿಕೊಂಡು ರಾ.ಹೆ. 13ರ ಲೊಕೋಪಯೋಗಿ ರಸ್ತೆಯಲ್ಲಿ ಸಾಗಿಸುತ್ತಿದೆ. ಮಿಜಾರು ಪರಿಸರವು ಜನವಸತಿ ಪ್ರದೇಶವಾಗಿದ್ದು ಇಲ್ಲಿ ನಿಧಾನವಾಗಿ ವಾಹನ ಚಲಾಯಿಸುವಂತೆ ವಾಹನ ಚಾಲಕರುಗಳಿಗೆ ಮನವಿ ಮಾಡಲಾಗಿತ್ತು ಮತ್ತು ಅಪಘಾತಗಳಿಗೆ ಕಡಿವಾಣ ಹಾಕುವಂತೆ ವಿನಂತಿಸಿಕೊಂಡಿದ್ದರು. ಅಲ್ಲದೆ ಎಡಪದವು ಗ್ರಾ.ಪಂ ಮುಖಾಂತರ ನಿರ್ಣಯ ಮಾಡಿ ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆಗೆ ಮನವಿಯನ್ನು ಕಳೆದ ಮೂರು ತಿಂಗಳ ಹಿಂದೆ ಸಲ್ಲಿಸಲಾಗಿತ್ತು. ಆದರೆ ಇದರ ಹೊರತಾಗಿಯೂ ಲಾರಿಗಳು ಅಧಿಕ ಭಾರ ಹೊತ್ತು ಅಜಾಗರೂಕತೆ ಮತ್ತು ಅತೀವೇಗದಿಂದ ಚಲಿಸಿ ಮೂರು ಬಾರಿ ಸಣ್ಣ ಅಪಘಾತಗಳು ನಡೆದಿವೆ.

   ಪ್ರತಿದಿನವೂ ಬೆಳಿಗ್ಗೆ 5 ಗಂಟೆಯಿಂದ ಟಿಪ್ಪರ್‌ಗಳಲ್ಲಿ ಜಲ್ಲಿ ಕಲ್ಲನ್ನು ತುಂಬಿಸಿಕೊಂಡು ಹೋಗುತ್ತಿದ್ದು, ಅದರಂತೆ ಬುಧವಾರದಂದು ಗ್ರಾಮಸ್ಥರು ಲಾರಿಗಳನ್ನು ತಡೆಹಿಡಿದು ಎಚ್ಚರಿಕೆಯನ್ನು ನೀಡಿದಾಗ ಇನ್ನು ಮುಂದೆ ಈ ರಸ್ತೆಯಲ್ಲಿ ಬರುವುದಿಲ್ಲವೆಂದು ತಿಳಿಸಿದ್ದಾರೆ.

 ಈ ಸಂದರ್ಭದಲ್ಲಿ ಮಿಜಾರು ನಾಗರಿಕ ಹಿತ ರಕ್ಷಣಾ ವೇದಿಕೆಯ ಸುಧಾಕರ ಪೂಂಜಾ, ಸುದರ್ಶನ್ ಪೂಂಜಾ ಸಹಿತ ಗ್ರಾಮಸ್ಥರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News