ನೋಟು ರದ್ದತಿ: 50 ದಿನಗಳ ಅವಧಿಯ ಕೊನೆಗೆ ಪ್ರಧಾನಿ ದೇಶದ ಕ್ಷಮೆ ಯಾಚಿಸಬೇಕು: ಕಾಂಗ್ರೆಸ್
ಜೈಪುರ/ಶ್ರೀನಗರ, ಡಿ.29: ಹೊಸ ವರ್ಷದ ಮುನ್ನಾ ದಿನದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ನೋಟು ರದ್ದತಿಯಿಂದ ಜನರಿಗಾಗಿರುವ ತೊಂದರೆಗಾಗಿ ರಾಷ್ಟ್ರದ ಕ್ಷಮೆ ಯಾಚಿಸಬೇಕೆಂದು ಕಾಂಗ್ರೆಸ್ ಇಂದು ಆಗ್ರಹಿಸಿದೆ. ಜ.6ರಿಂದ ದೇಶವ್ಯಾಪಿ ಪ್ರತಿಭಟನೆ ನಡೆಸುವ ಪ್ರತಿಜ್ಞೆಯನ್ನು ಅದು ಕೈಗೊಂಡಿದೆ.
ನೋಟು ರದ್ದತಿಯ 50 ದಿನಗಳು ಪೂರೈಸುವ ವೇಳೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲು ಸಿದ್ಧರಾಗಿರುವ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್‌ನ ಪ್ರಧಾನ ವಕ್ತಾರ ರಣದೀಪ್ ಸುರ್ಜೆವಾಲ, ವಾಸ್ತವಕ್ಕಿಂತ ಭಾರೀ ದೂರವಿರುವ ಘೋಷಣೆಗಳನ್ನು ಮಾಡುವಲ್ಲಿ ಪ್ರಧಾನಿ ಸಿದ್ಧಹಸ್ತರೆಂದು ಟೀಕಿಸಿದ್ದಾರೆ.
ನೋಟು ರದ್ದತಿಯ 50 ದಿನಗಳ ಬಳಿಕವೂ ಸಾಮಾನ್ಯ ಸ್ಥಿತಿ ಮರಳಿಲ್ಲ. ಪ್ರಧಾನಿಯ ನೋಟು ನಿಷೇಧ ಕ್ರಮವು ‘ದೇಶಬಂದಿಯಾಗಿ(ದೇಶಕ್ಕೆ ಬೀಗಮುದ್ರೆ) ಪರಿಣಮಿಸಿದೆ. ಅಭಿವೃದ್ಧಿ ನಿಲುಗಡೆಗೆ ಬಂದಿದೆ. ಇದೊಂದು ಹಗರಣವಾಗಿದ್ದು, ಅನಗತ್ಯ ಕ್ರಮವಾಗಿದೆ. ಅದರಿಂದ ದೇಶದಲ್ಲಿ ಆರ್ಥಿಕ ಅಸ್ಥಿರತೆ ಉಂಟಾಗಿದೆ. ನಗದು ಅಭಾವದಿಂದಾಗಿ ದೇಶಾದ್ಯಂತ ಹಲವರು ಸತ್ತಿದ್ದಾರೆ. ಇದು ದೇಶದ ಬಡವರ ಮೇಲೆ ನಡೆಸಿದ ಸರ್ಜಿಕಲ್ ದಾಳಿಯಾಗಿದ್ದು, ಅವರಿಗೆ ಭಾರೀ ಸಂಕಷ್ಟವನ್ನುಂಟು ಮಾಡಿದೆಯೆಂದು ಅವರು ಜೈಪುರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯೊಂದರಲ್ಲಿ ಆರೋಪಿಸಿದ್ದಾರೆ.
ನೋಟು ನಿಷೇಧದಿಂದ 50 ದಿನಗಳಲ್ಲಿ 115 ಸಾವುಗಳು ಸಂಭವಿಸಿವೆ. ಆರ್‌ಬಿಐ ತನ್ನ ನಿಯಮಗಳನ್ನು 126 ಸಾರಿ ಬದಲಾಯಿಸಿದೆ. ರದ್ದಾದಷ್ಟು ನೋಟುಗಳು ಮುದ್ರಣಗೊಳ್ಳಲು 6 ತಿಂಗಳು ಬೇಕು. ಜ.6ರಿಂದ ತಾವು ನೋಟು ರದ್ದತಿಯ ವಿರುದ್ಧ ದೇಶಾದ್ಯಂತ ಸತತ ಪ್ರತಿಭಟನೆಗಳನ್ನು ನಡೆಸಲಿದ್ದೇವೆ. ಮೃತರ ಕುಟುಂಬಗಳಿಗೆ ಪರಿಹಾರ, ವ್ಯಾಪಾರಿಗಳು ಹಾಗೂ ಜನಸಾಮಾನ್ಯರಿಗೆ ಆದಾಯ ಹಾಗೂ ಮಾರಾಟ ತೆರಿಗೆ ವಿನಾಯ್ತಿಗಾಗಿ ತಾವು ಒತ್ತಾಯಿಸುತ್ತಿದ್ದೇವೆಂದು ಸುರ್ಜೇವಾಲ್ ಹೇಳಿದ್ದಾರೆ.
ಪ್ರಧಾನಿ ಇಲ್ಲಿಯ ವರೆಗೆ ಕ್ಷಮೆ ಯಾಚನೆ ಬಿಡಿ, ಸಂತ್ರಸ್ತರಿಗೆ ಸಹಾನುಭೂತಿಯ ಒಂದು ಮಾತನ್ನೂ ಹೇಳಿಲ್ಲ. ಆದರೆ, ಅವರು ಬಯಸಿದ್ದ 50 ದಿನಗಳ ಕೊನೆಗೆ ಈ ವಿಷಯದಲ್ಲಿ ಮಾತನಾಡುವಾಗ ತಾವು ಪ್ರಧಾನಿ ಕ್ಷಮಾ ಯಾಚನೆ ಮಾಡುವುದನ್ನು ತಾವು ನಿರೀಕ್ಷಿಸುತ್ತಿದ್ದೇವೆಂದು ಕಾಂಗ್ರೆಸ್ ನಾಯಕ ಮೀಮ್ ಅಫ್ಝಲ್ ಶ್ರೀನಗರದಲ್ಲಿ ಪತ್ರಕರ್ತರಿಗೆ ತಿಳಿಸಿದ್ದಾರೆ.
ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಯ ಭರವಸೆಯನ್ನು ಮೋದಿ ನೀಡಿದ್ದರು. ಆದರೆ, ಎರಡುವರೆ ವರ್ಷಗಳಲ್ಲಿ ಕೇವಲ 1.5 ಕೋಟಿ ಉದ್ಯೋಗಗಳಷ್ಟೇ ಸೃಷ್ಟಿಯಾಗಿವೆ. ಕಳೆದ ತಿಂಗಳು ನೋಟು ರದ್ದತಿ ಘೋಷಿಸಿದ ಬಳಿಕ, ಕನಿಷ್ಠ 10 ಕೋಟಿ ಜನರು ನಿರುದ್ಯೋಗಿಗಳಾಗಿದ್ದಾರೆಂದು ಅವರು ಆರೋಪಿಸಿದ್ದಾರೆ.