×
Ad

ಡಿ. 31ರೊಳಗೆ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್: ಸಂಸದ ನಳಿನ್ ಸೂಚನೆ

Update: 2016-12-29 19:56 IST

ಮಂಗಳೂರು, ಡಿ.29: ಬ್ಯಾಂಕ್‌ಗಳಲ್ಲಿ ಖಾತೆಗಳಿಗೆ ಆಧಾರ್ ಲಿಂಕ್ ಕಾರ್ಯ ಶೇ. 55ರಷ್ಟು ಮಾತ್ರ ಪೂರ್ಣಗೊಂಡಿದೆ. ಉಳಿದ ಲಿಂಕ್ ಕಾರ್ಯವನ್ನು ಡಿ. 31ರೊಳಗೆ ಮುಗಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಬ್ಯಾಂಕ್‌ಗಳ ಪರಿಶೀಲನಾ ಸಮಿತಿ ವತಿಯಿಂದ ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಬ್ಯಾಂಕಿಂಗ್ ಅಭಿವೃದ್ಧಿ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಇನ್ನೂ 1 ಲಕ್ಷ ಮಂದಿಯ ಆಧಾರ್ ಲಿಂಕ್ ಕಾರ್ಯ ಬಾಕಿಯಿದೆ. ಇದನ್ನು ತ್ವರಿತಗೊಳಿಸದಿದ್ದರೆ ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕರ ವೇತನಕ್ಕೆ ಸಮಸ್ಯೆಗಳಾಗುವ ಸಾಧ್ಯತೆ ಇವೆ. ಬ್ಯಾಂಕ್ ಅಧಿಕಾರಿ-ಸಿಬ್ಬಂದಿ ವರ್ಗ ಮಾಡುವ ತಪ್ಪಿನಿಂದ ಜನ ಸಾಮಾನ್ಯರು ತೊಂದರೆ ಅನುಭವಿಸಬಾರದು. ಹಾಗಾಗಿ ಆದ್ಯತೆ ನೆಲೆಯಲ್ಲಿ ಲಿಂಕ್ ಕಾರ್ಯ ಶೀಘ್ರ ಪೂರ್ಣಗೊಳಿಸಬೇಕು ಎಂದು ನಳಿನ್ ಹೇಳಿದರು.
  
ಜಿಲ್ಲೆಯ 230 ಗ್ರಾಪಂಗಳಲ್ಲಿ ಮತ್ತು 368 ಹಳ್ಳಿಗಳು ಡಿಜಿಟಲ್ ಪೇಮೆಂಟ್ ಪ್ರಾರಂಭಿಸುವ ನಿಟ್ಟಿನಲ್ಲಿ ಜ.3ರಿಂದ ಪೂರಕ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ. ಬ್ಯಾಂಕ್‌ಗಳು ಆಧಾರ್, ಯುಪಿಐ, ಪಿಒಐ ಮೂಲಕ ಮಾಡಲಾದ ವ್ಯವಹಾರದ ಬಗ್ಗೆ ಮಾಹಿತಿ ಒದಗಿಸಬೇಕು ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ರಾಘವ ಯಜಮಾನ್ಯ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ನಳಿನ್ ಕುಮಾರ್ ಕಟೀಲ್, ಡಿಜಿಟಲ್ ಪೇಮೆಂಟ್ ಕುರಿತಂತೆ 200 ಮಂದಿಯ ತಂಡ ರಚಿಸಲಾಗುತ್ತಿದೆ. ಮೊದಲು ಮನೆ-ಮನೆಗಳಲ್ಲಿ ಜಾಗೃತಿ ಮೂಡಿಸಿ ಬಳಿಕ ಅಂಗಡಿಮುಂಗಟ್ಟುಗಳಲ್ಲಿ ಬಳಕೆಗೆ ಮಾಹಿತಿ ನೀಡಲಾಗುತ್ತದೆ. ಬೇರೆ-ಬೇರೆ ಕಾಲೇಜು ವಿದ್ಯಾರ್ಥಿಗಳ ಈ ತಂಡದೊಂದಿಗೆ ಆಯಾಯ ವಿಭಾಗದ ಸಿಬ್ಬಂದಿ ಕೂಡಾ ಕಾರ್ಯನಿರ್ವಹಿಸಲಿದ್ದಾರೆ ಎಂದು ನುಡಿದರು.
  
 ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಕ್ರೆಡಿಟ್ ಡೆಪಾಸಿಟ್ ಪ್ರಮಾಣ ಶೇ. 59ರಷ್ಟಿದ್ದು, ಈ ಸಾಲಿನಲ್ಲಿ ಶೇ. 57.44ರಷ್ಟು ಮಾತ್ರ ತಲುಪಿದೆ. ನಿಗದಿತ ಶೇ. 60ರ ರೇಖೆಯನ್ನು ತಲುಪಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣವೇನು? 2013-14ರ ಸಾಲಿನಲ್ಲಿ ಸೆಪ್ಟೆಂಬರ್ ತಿಂಗಳವರೆಗೆ ಠೇವಣಿ ಶೇ.17.40ರಷ್ಟಿದ್ದರೆ, 2014-15ರ ಸಾಲಿನಲ್ಲಿ ಶೇ. 14.26, ಮತ್ತು 2015-16ರ ಸಾಲಿನಲ್ಲಿ ಶೇ. 1.24ರಷ್ಟಾಗಿದೆ. ಅಲ್ಲದೆ ಮುಂಗಡ ಪಾವತಿ ಕ್ರಮಬದ್ಧವಾಗಿ 2013-14ರ ಸಾಲಿನಲ್ಲಿ ಶೇ. 24.32, 2014-15ರ ಸಾಲಿನಲ್ಲಿ ಶೇ.11.18 ಹಾಗೂ 2015-16ರ ಸಾಲಿನಲ್ಲಿ ಶೇ.6.59ರಷ್ಟಿದೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ರಾಘವ ಯಜಮಾನ್ಯ ಹೇಳಿದರು.

ಬ್ಯಾಂಕ್‌ಗಳು ಸಾಲ ಸೌಲಭ್ಯ ಒದಗಿಸುವ ಕುರಿತಂತೆ ನಡೆದ ಚರ್ಚೆಯಲ್ಲಿ ಕೋಳಿ ಸಾಕಣೆಗೆ ಬ್ಯಾಂಕ್ ಬೆಂಬಲ ದೊರೆಯದಿರುವುದನ್ನು ಮನಗಂಡ ಸಂಸದರು, ಕೋಳಿ ಸಾಕಣೆ ಉತ್ತಮ ವ್ಯವಹಾರವಾಗಿದೆ. ಸಾಕಣೆ ಮಾಡುವವರು ಒಳ್ಳೆಯ ಲಾಭ ಗಳಿಸುವುದಿಂದ ಬ್ಯಾಂಕ್‌ಗಳಿಗೆ ಸಾಲ ಮರುಪಾವತಿಯಾಗುವುದರಲ್ಲಿ ಯಾವುದೇ ಅಡಚಣೆಯಾಗುವುದಿಲ್ಲ. ಈ ನಿಟ್ಟಿನಲ್ಲಿ ಕೋಳಿ ಸಾಕಣೆಗೆ ಸಾಲ ಒದಗಿಸಬೇಕು ಎಂದು ಸೂಚಿಸಿದರು.

 ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಜಿಲ್ಲೆಯ ಬ್ಯಾಂಕ್‌ಗಳು 2016-17ರ ಸಾಲಿನಲ್ಲಿ ಸೆಪ್ಟೆಂಬರ್ ತಿಂಗಳವರೆಗೆ 155.94 ಕೋಟಿ ರೂ. ಪ್ರಮಾಣದ 9, 208 ಸಾಲವನ್ನು ನೀಡಿದೆ. ಪ್ರಧಾನ ಮಂತ್ರಿ ಜನ್‌ಧನ್ ಯೋಜನೆಯಲ್ಲಿ 3,43,198 ಖಾತೆಗಳು ತೆರೆಯಲಾಗಿವೆ. ಅಟಲ್ ವಿಮಾ ಯೋಜನೆಯಲ್ಲಿ 12, 485 ಖಾತೆಗಳನ್ನು ತೆರೆಯಲಾಗಿದೆ. ನವೀಕರಿಸಬಹುದಾದ ಇಂಧನ ಕುರಿತಂತೆ ಬ್ಯಾಂಕ್‌ಗಳು ಪ್ರಾಮುಖ್ಯತೆ ನೀಡುವುದು ಕಡಿಮೆಯಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯುವ ಮುಂದಿನ ಸಭೆಯಲ್ಲಿ ಯಾವ ಬ್ಯಾಂಕ್‌ಗಳು ಯಾವ ಗ್ರಾಮಗಳನ್ನು ದತ್ತು ತೆಗೆದುಕೊಳ್ಳುತ್ತದೆ ಎಂದು ಸ್ಪಷ್ಟ ಮಾಹಿತಿ ಒದಗಿಸಬೇಕು ಎಂದು ಲೀಡ್ ಬ್ಯಾಂಕ್ ಮೇನೇಜರ್ ರಾಘವ ಯಜಮಾನ್ಯ ಹೇಳಿದರು.

ಅಸಮಾಧಾನಗೊಂಡ ಸಂಸದರು

ಬ್ಯಾಂಕ್‌ಗಳ ವಾರ್ಷಿಕ ಠೇವಣಿ, ಮುಂಗಡ ಪಾವತಿಯಲ್ಲಿ ಅಭಿವೃದ್ಧಿ ಹಾಗೂ ಸಿಡಿ ಪ್ರಮಾಣದ ಬಗ್ಗೆ ಮಾಹಿತಿ ಬಯಸಿದ ಸಂಸದರು ಅಧಿಕಾರಿಗಳ ಅಸ್ಪಷ್ಟ ಉತ್ತರದಿಂದ ತೀವ್ರ ಅಸಮಾಧಾನಗೊಂಡರು. ಯಾವುದೇ ಹಾರಿಕೆ ಉತ್ತರ ನೀಡಬೇಡಿ. ಸಮಯ ಕಳೆಯಲು ನಾನಿಲ್ಲಿಗೆ ಬರುವುದಲ್ಲ. ಪ್ರತೀ ಮೂರು ತಿಂಗಳಿಗೊಮ್ಮೆ ಸಭೆ ನಡೆಸುವ ಮೊದಲು ನೋಟಿಸ್ ಕಳುಹಿಸಲಾಗುತ್ತದೆ. ಸಭೆಗೆ ಬರುವಾಗ ಸರಿಯಾದ ಉತ್ತರದೊಂದಿಗೆ ಬರಬೇಕು ಎಂದು ತಾಕೀತು ಮಾಡಿದರು.

ಇದಕ್ಕೆ ದನಿಗೂಡಿಸಿದ ಜಿ.ಪಂ. ಸಿಇಒ ಡಾ. ರವಿ, ಬ್ಯಾಂಕ್‌ಗಳು ಸಭೆಯನ್ನು ಹಗುರವಾಗಿ ತೆಗೆದುಕೊಳ್ಳುತ್ತಿರುವುದು ಸ್ಪಷ್ಟವಾಗುತ್ತದೆ. ಇದು ಕೂಡಾ ಸರಕಾರಿ ಕಾರ್ಯಕ್ರಮ. ಸರಿಯಾದ ಮಾಹಿತಿಯನ್ನು ಒದಗಿಸಬೇಕು ಎಂದು ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News