×
Ad

ನೋಟು ಅಮಾನ್ಯ ಹಿಂದಿನ ಕಾರಣ ತಿಳಿಸಲು ನಿರಾಕರಿಸಿದ ಆರ್‌ಬಿಐ

Update: 2016-12-29 21:33 IST

ಹೊಸದಿಲ್ಲಿ,ಡಿ.29: 500 ಮತ್ತು 1,000 ರೂ.ನೋಟುಗಳನ್ನು ಸರಕಾರವು ಅಮಾನ್ಯಗೊಳಿಸಿದ್ದೇಕೆ? ಈ ಪ್ರಶ್ನೆಗೆ ಉತ್ತರಿಸಲು ಆರ್‌ಬಿಐ ನಿರಾಕರಿಸಿದೆ.

ನೋಟು ರದ್ದತಿಯನ್ನು ಘೋಷಿಸಿ 50 ದಿನಗಳ ಬಳಿಕವೂ ಅದರ ಹಿಂದಿನ ಕಾರಣವನ್ನು ಬಹಿರಂಗಗೊಳಿಸುವಂತಿಲ್ಲ ಎಂದು ಆರ್‌ಬಿಐ ಭಾವಿಸಿದೆ. ರದ್ದುಗೊಳಿ ಸಲಾದ ಕರೆನ್ಸಿ ನೋಟುಗಳಿಂದ ಉಂಟಾಗಿರುವ ಕೊರತೆಯನ್ನ ಹೊಸ ನೋಟುಗಳೊಂದಿಗೆ ಯಾವಾಗ ತುಂಬಲಾಗುವುದು ಎನ್ನುವ ಬಗ್ಗೆಯೂ ಯಾವುದೇ ವಿವರಗಳನ್ನು ನೀಡಲು ಅದು ನಿರಾಕರಿಸಿದೆ.

ಈ ಪ್ರಶ್ನೆಯ ಸ್ವರೂಪವು ಮಂದಿನ ಕಾರ್ಯಕ್ರಮವೊಂದರ ದಿನಾಂಕವನ್ನು ಕೇಳಿದಂತಿದೆ. ಆರ್‌ಟಿಐ ಕಾಯ್ದೆಯ ಕಲಂ 2(ಎಫ್)ನಡಿ ಇದನ್ನು ಮಾಹಿತಿಯೆಂದು ವ್ಯಾಖ್ಯಾನಿಸ ಲಾಗಿಲ್ಲ ಎಂದು ಅದು ಆರ್‌ಟಿಐ ವಿಚಾರಣೆಗೆ ಉತ್ತರಿಸಿದೆ.

 ನೋಟು ರದ್ದತಿ ಹಿಂದಿನ ಕಾರಣವನ್ನು ತಿಳಿಸಲು ತನ್ನ ನಿರಾಕರಣೆಗೆ ಅದು ಮಾಹಿತಿ ಹಕ್ಕು ಕಾಯ್ದೆಯ ಕಲಂ 8(1)(ಎ) ಅನ್ನು ಉಲ್ಲೇಖಿಸಿದೆ. ಈ ಕಲಂ ಅಡಿ ದೇಶದ ಸಾರ್ವಭೌಮತೆ ಮತ್ತು ಅಖಂಡತೆ, ಭದ್ರತೆ ಇತ್ಯಾದಿಗಳ ಮೇಲೆ ಪರಿಣಾಮ ಬೀರಬಲ್ಲ ಮಾಹಿತಿಯನ್ನು ಬಹಿರಂಗಗೊಳಿಸುವಂತಿಲ್ಲ.

ಆರ್‌ಟಿಐ ಅರ್ಜಿಯಲ್ಲಿ ಕೋರಲಾದ ಮಾಹಿತಿಯನ್ನು ನಿರಾಕರಿಸುವಾಗ ಆರ್‌ಬಿಐ ಈ ಪ್ರಕರಣದಲ್ಲಿ ಮೇಲಿನ ಕಲಂ ಹೇಗೆ ಅನ್ವಯಿಸುತ್ತದೆ ಎನ್ನುವುದನ್ನು ವಿವರಿಸಿಲ್ಲ ಮತ್ತು ಅರ್ಜಿಯಲ್ಲಿ ಕೋರಲಾದ ಮಾಹಿತಿಯು ಈ ಕಲಂ ಅಡಿ ಉಲ್ಲೇಖಿಸಲಾಗಿರುವ ಯಾವುದೇ ಕಾರಣಕ್ಕೂ ತಾಳೆಯಾಗುತ್ತಿಲ್ಲ ಎಂದು ಮಾಜಿ ಕೇಂದ್ರ ಮಾಹಿತಿ ಆಯುಕ್ತ ಶೈಲೇಶ ಗಾಂಧಿ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಸರಕಾರಿ ಸಂಸ್ಥೆಯೊಂದು ಆರ್‌ಟಿಐ ಕಾಯ್ದೆಯಡಿ ಯಾವುದೇ ಮಾಹಿತಿಯನ್ನು ಬಹಿರಂಗಗೊಳಿಸಲು ತಿರಸ್ಕರಿಸಿದಾಗ ಅದು ಹಾಗೆ ಮಾಡಲು ಸ್ಪಷ್ಟ ಕಾರಣಗಳನ್ನು ತಿಳಿಸಬೇಕು ಎನ್ನುವುದು ಕಾಯ್ದೆಯಲ್ಲಿ ಸುಸ್ಪಷ್ಟವಾಗಿದೆ ಎಂದೂ ಅವರು ಹೇಳಿದರು.

ಆರ್‌ಬಿಐ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಅರ್ಜಿದಾರ ವೆಂಕಟೇಶ ನಾಯಕ್ ತಿಳಿಸಿದ್ದಾರೆ. ಆರ್‌ಬಿಐನ ಈ ನೀತಿಯ ವಿರುದ್ಧ ಗಾಂಧಿ ಅವರು ಕೇಂದ್ರ ಮಾಹಿತಿ ಆಯೋಗಕ್ಕೆ ದೂರನ್ನೂ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News