ಕೊರಗರ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿ: ಕೋಟ
ಉಡುಪಿ, ಡಿ.29: ರಾಜ್ಯ ಸಮಾಜ ಕಲ್ಯಾಣ ಸಚಿವ ಎಚ್.ಅಂಜನೇಯ ಅವರು ಹೊಸವರ್ಷದ ದಿನದಂದು ಜಿಲ್ಲೆಯ ಕೊರಗರ ಕಾಲನಿಯಲ್ಲಿ ಗ್ರಾಮ ವಾಸ್ತವ್ಯ ಹೂಡುವ ಕಾರ್ಯಕ್ರಮವನ್ನು ಸ್ವಾಗತಿಸಿದ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು, ಇದಕ್ಕೂ ಮೊದಲು ಕಳೆದ ಮೂರು ವರ್ಷಗಳಿಂದ ಚಿಕ್ಕಾಸು ಹಣ ಬಿಡುಗಡೆಯಾಗದ ಕೊರಗ ವಿವಿಧ ಯೋಜನೆಗಳಿಗೆ ತಕ್ಷಣ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ತನ್ನ ಕಚೇರಿಯಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ದ.ಕ.ಜಿಲ್ಲೆ ಮೂಡುಬಿದರೆ ಕ್ಷೇತ್ರದ ಪಡುಪಣಂಬೂರು ಗ್ರಾಮದ ಕೊರಗರ ಕೇರಿಯಲ್ಲಿ ಹೊಸ ವರ್ಷದಂದು ವಾಸ್ತವ್ಯ ಮಾಡಿ 10 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದು ಬಿಟ್ಟರೆ ಅಲ್ಲಿಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಒಂದು ನಯಾಪೈಸೆ ಕೆಲಸ ಅಲ್ಲಿ ಆಗಿಲ್ಲ. ಆದರೆ ಬೈಂದೂರು ಕ್ಷೇತ್ರದ ಮೂರೂರಿನಲ್ಲಿ ಈ ರೀತಿ ಆಗಬಾರದು ಎಂದರು.
ಕೊರಗ ಅಭಿವೃದ್ಧಿಗೆ ಬಿಜೆಪಿ ಸರಕಾರವಿದ್ದಾಗ 8ಕೋಟಿ ರೂ.ಗಳಿಗೂ ಅಧಿಕ ಹಣ ಬಿಡುಗಡೆಯಾಗಿತ್ತು. ಆದರೆ ಕಾಂಗ್ರೆಸ್ ಸರಕಾರದ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕುಡಿಯುವ ನೀರು ಯೋಜನೆ ಸೇರಿದಂತೆ ಯಾವುದೇ ಯೋಜನೆಗಳೂ ಚಿಕ್ಕಾಸು ಬಿಡುಗಡೆಯಾಗಿಲ್ಲ ಎಂದರು.
ಉಡುಪಿ ಕೆಡಿಪಿ ಸಭೆಯಲ್ಲಿ ಕೊರಗರ ಮನೆ ನಿರ್ಮಾಣಕ್ಕೆ ಸರಕಾರ ನೀಡುವ ಅನುದಾನ ಯಾವುದಕ್ಕೂ ಸಾಕಾಗದು. ಕೊರಗರ ಮನೆ ನಿರ್ಮಾಣದ ಘಟಕ ವೆಚ್ಚವನ್ನು 4.50 ಲಕ್ಷ ರೂ.ಗಳಿಗೆ ಹೆಚ್ಚಿಸಿ ನಿರ್ಮಿತಿ ಕೇಂದ್ರದ ಮೂಲಕ ಮನೆ ಕಟ್ಟಲು ಶಿಫಾರಸ್ಸು ಮಾಡಿ ನಿರ್ಣಯ ಕೈಗೊಳ್ಳಲಾಗಿತ್ತು. ಜಿಲ್ಲೆಯಲ್ಲಿ 500ಕ್ಕೂ ಅಧಿಕ ಕೊರಗರು ಮನೆ ಕಟ್ಟುವ ಸಾಲಿನಲ್ಲಿದ್ದು, ಈ ಯೋಜನೆಯನ್ನು ತಕ್ಷಣ ಘೋಷಿಸಬೇಕು ಎಂದು ಕೋಟ ಆಗ್ರಹಿಸಿದರು.
ಜಿಲ್ಲೆಯಲ್ಲಿ ಕೊರಗರ 2600 ಕುಟುಂಬಗಳಿದ್ದು, 11,133 ಜನಸಂಖ್ಯೆ ಇದೆ. ಇವರಿಗೆ ಶಾಶ್ವತ ಆರೋಗ್ಯ ಯೋಜನೆಯನ್ನು (ಆರೋಗ್ಯ ಕಾರ್ಡ್ ಮೂಲಕ) ಜಾರಿಗೊಳಿಸಬೇಕು, ಪೌಷ್ಠಿಕ ಆಹಾರ ದೊರೆಯುವಂತಾಗಬೇಕು ಎಂದ ಕೋಟ, ಜಿಲ್ಲೆಯಲ್ಲಿ 1000ಕ್ಕೂ ಅಧಿಕ ದಲಿತ ಕುಟುಂಬಗಳು ನೂರಾರು ವರ್ಷಗಳಿಂದ ಖಾಸಗಿ ಭೂಮಿಯಲ್ಲಿ ವಾಸವಾಗಿದ್ದು, ಹಕ್ಕುಪತ್ರಗಳಿಲ್ಲದೇ ಮನೆ ಪಜಡೆಯಲಾಗುತ್ತಿಲ್ಲ. ಅವರ ಮನೆಯಡಿ ಜಾಗವನ್ನು ಜಿಲ್ಲಾಧಿಕಾರಿ ಮೂಲಕ ಭೂಸ್ವಾಧೀನ ಪಡಿಸಿಕೊಂಡು ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸುವುದಾಗಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.