×
Ad

ಮಂಗಳೂರಿಗೆ ಬಂದು 93 ವರ್ಷದ ದಾದಿಯನ್ನು ಭೇಟಿ ಮಾಡಿದ ಬಹರೈನ್ ವಿದೇಶಾಂಗ ಸಚಿವ !

Update: 2016-12-29 23:11 IST

ಮಂಗಳೂರು, ಡಿ.29: ತಾನು ಚಿಕ್ಕ ಮಗುವಾಗಿದ್ದ ಸಂದರ್ಭ ತನ್ನ ಯೋಗಕ್ಷೇಮ ನೋಡಿಕೊಂಡಿದ್ದ ದಾದಿಯೋರ್ವರನ್ನು ಭೇಟಿಯಾಗಲು ಬಹರೇನ್‌ನ ವಿದೇಶಿ ಸಚಿವ ಶೇಖ್ ಖಾಲಿದ್ ಬಿನ್ ಹಮದ್ ಅಲ್ ಖಲೀಫಾ ಅವರು ಮಂಗಳೂರಿಗೆ ಆಮಿಸಿದರು.

ಭಾರತಕ್ಕೆ ಖಾಸಗಿ ಭೇಟಿ ನೀಡಿರುವ ಅಲ್ ಖಲೀಫಾ ಅವರು ತಿರುವನಂತಪುರಕ್ಕೆ ಖಾಸಗಿ ಕಾರ್ಯಕ್ರಮದ ಪ್ರಯುಕ್ತ ತೆರಳಿದ್ದರು. ಅಲ್ಲಿಂದ ನೇರವಾಗಿ ಮಂಗಳೂರಿಗೆ ಆಗಮಿಸಿ, ಕಾರ್ಮಿನ್ ಮಥಾಯಸ್ ಎಂಬವರ ಮನೆಗೆ ತೆರಳಿ ಅವರೊಂದಿಗೆ ಕೆಲ ಸಮಯ ಕಳೆದರು.

1959ರ ಜನವರಿಯಲ್ಲಿ ಬಹರೇನ್‌ಗೆ ಆಗಮಿಸಿದ್ದ ಕಾರ್ಮಿನ್ ಅಲ್ಲಿ ನನ್ನನ್ನು ತನ್ನ ಮಗುವಿಗಿಂತಲೂ ಚೆನ್ನಾಗಿ ಉಪಚರಿಸಿ ಬೆಳೆಸಿದ್ದಾರೆ. ಜೊತೆಗೆ ನನ್ನ ದಿವಂಗತ ಸಹೋದರ ಅಬ್ದುಲ್ಲಾ, ನನ್ನ ಇಬ್ಬರು ಸೋದರಿಯರು ಕೂಡಾ ಕಾರ್ಮಿನ್ ಅಮ್ಮನ ಆರೈಕೆಯಲ್ಲೇ ಬೆಳೆದವರು. ಅವರೊಂದಿಗೆ ಕಳೆದ ಆ ಪ್ರತೀ ಕ್ಷಣವೂ ನಮ್ಮ ಜೀವನದಲ್ಲಿ ಉತ್ಸಾಹದ ಕ್ಷಣಗಳಾಗಿದ್ದವು. ದೇವರು ಅವರಿಗೆ ಆರೋಗ್ಯಭಾಗ್ಯ ಕರುಣಿಸಲಿ . ಆಗಿನ್ನೂ 35ರ ಹರೆಯದಲ್ಲಿದ್ದ ಕಾರ್ಮಿನ್ ಈಗ 93ರ ವಯೋವ್ಧದ್ಧೆ ಎಂದು ತಿಳಿಸಿರುವ ಆಲ್ ಖಲೀಫಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕಾರ್ಮಿನ್‌ರೊಂದಿಗೆ ನಿಂತಿರುವ ಫೋಟೋ ಹಾಕಿದ್ದಾರೆ.

  ಕೆಲ ದಿನಗಳ ಹಿಂದೆ ಅಲ್ ಖಲೀಫಾ ಅವರು ಕೊಲ್ಲಂನಲ್ಲಿರುವ ಲಾಯ್ಲ ಎಂಬವರ ಮನೆಗೆ ಭೇಟಿ ನೀಡಿದ್ದರು. ಲಾಯ್ಲ ಅವರು ಬಹರೇನ್‌ನ ಖಲೀಫಾ ಅವರ ಮನೆವಾರ್ತೆ ಕೆಲಸವನ್ನು 21 ವರ್ಷ ಮಾಡಿಕೊಂಡಿದ್ದರು. ಪ್ರೀತಿ, ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ನಮ್ಮೆಡನೆ 21 ವರ್ಷ ಕಳೆದ ಲಾಯ್ಲೆ ಅಮ್ಮನನ್ನು ಈ ದಿನ ಭೇಟಿಯಾದುದು ಖುಷಿ ತಂದಿದೆ ಎಂದವರು ಇನ್‌ಸ್ಟಾಗ್ರಾಂನಲ್ಲಿ ಬರೆದಿರುವ ಸಂದೇಶದಲ್ಲಿ ತಿಳಿಸಿದ್ದರಲ್ಲದೆ, ಈ ಬಡ ಮಹಿಳೆಯೊಂದಿಗೆ ನಿಂತುಕೊಂಡಿರುವ ಫೋಟೋವನ್ನು ಕೂಡಾ ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News