ನೋಟು ರದ್ದತಿ:ನಾಳೆ ಪ್ರಧಾನಿ ಭಾಷಣ
ಹೊಸದಿಲ್ಲಿ,ಡಿ.30: ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ನೋಟು ರದ್ದತಿಯ ತನ್ನ ತರಾತುರಿಯ ಕ್ರಮದ ಪರಿಣಾಮಗಳ ಬಗ್ಗೆ ತನ್ನ ಭಾಷಣದಲ್ಲಿ ಅವರು ಚರ್ಚಿಸಲಿದ್ದಾರೆ ಎನ್ನಲಾಗಿದೆ. ಜೊತೆಗೆ ಭ್ರಷ್ಟಾಚಾರದ ವಿರುದ್ಧ ಹೊಸ ಕ್ರಮಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ. ಬೇನಾಮಿ ಆಸ್ತಿಗಳ ವಿರುದ್ಧವೂ ಯುದ್ಧವನ್ನು ಅವರು ಸಾರುವ ನಿರೀಕ್ಷೆಯಿದೆ.ಹಳೆಯ 500 ಮತ್ತು 1,000 ರೂ.ನೋಟುಗಳನ್ನು ಬ್ಯಾಂಕಿಗೆ ಜಮೆ ಮಾಡಲು ನೀಡಲಾಗಿದ್ದ ಗಡುವು ಇಂದಿಗೆ ಮುಗಿಯುತ್ತಿದೆ. ರದ್ದು ಮಾಡಲಾಗಿದ್ದ ಕರೆನ್ಸಿಯ ಪೈಕಿ ಶೇ.90ರಷ್ಟು ಈಗಾಗಲೇ ಬ್ಯಾಂಕುಗಳಲ್ಲಿ ಠೇವಣಿಯಾಗಿದೆ ಎಂದು ಅಂದಾಜಿಸಲಾಗಿದೆ. ಕಪ್ಪುಹಣವನ್ನು ನಿರ್ಮೂಲಿಸುವ ಸರಕಾರದ ಗುರಿ ತಪ್ಪಿದೆಯೆನ್ನುವುದನ್ನು ಇದು ಸೂಚಿಸುತ್ತಿದೆ.
ಬ್ಯಾಂಕುಗಳು ಮತ್ತು ಎಟಿಎಂಗಳಿಂದ ಹಣ ಹಿಂಪಡೆಯುವುದರ ಮೇಲಿನ ಮಿತಿಯನ್ನು ತೆಗೆದು ಹಾಕಲಾಗುವುದೇ ಅಥವಾ ಹೊಸವರ್ಷಕ್ಕೂ ಇದು ಮುಂದುವರಿಯಲಿದೆಯೇ ಎಂಬ ಬಗ್ಗೆ ಈವರೆಗೆ ಯಾವುದೇ ಪ್ರಕಟಣೆ ಹೊರಬಿದ್ದಿಲ್ಲ. ಹೀಗಾಗಿ ಮೋದಿ ತನ್ನ ನಾಳೆಯ ಭಾಷಣದಲ್ಲಿ ಈ ಬಗ್ಗೆ ಸರಕಾರದ ನಿರ್ಧಾರವನ್ನು ಪ್ರಕಟಿಸಬಹುದು.