ಚೀನದ ವಿಶ್ವದಲ್ಲೇ ಅತ್ಯುನ್ನತ ಸೇತುವೆ ಸಂಚಾರಕ್ಕೆ ಮುಕ್ತ
ಬೀಜಿಂಗ್, ಡಿ.30: ವಿಶ್ವದ ಅತ್ಯಂತ ಎತ್ತರದ ಸೇತುವೆಯು ಚೀನದಲ್ಲಿ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಅದು ಪರ್ವತೀಯ ವಾಯುವ್ಯದ ಎರಡು ಪ್ರಾಂತ್ಯಗಳನ್ನು ಜೋಡಿಸುತ್ತಿದ್ದು, ಸಂಚಾರದ ಅವಧಿಯನ್ನು ಶೇ.75ರಷ್ಟು ಕಡಿಮೆ ಮಾಡಿದೆಯೆಂದು ಶುಕ್ರವಾರ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬೈಪಾಂಜಿಯಾಂಗ್ ಸೇತುವೆಯು ನದಿಯೊಂದರ ಮೇಲೆ 565 ಮೀ. (1,854 ಅಡಿ) ಎತ್ತರದಲ್ಲಿದ್ದು, ಯುನ್ನಾನ್ ಹಾಗೂ ಗೈರೆವ್ ಪರ್ವತ ಪ್ರಾಂತಗಳನ್ನು ಜೋಡಿಸುತ್ತದೆಂದು ಗೈರೆವ್ ಪ್ರಾಂತೀಯ ಸಾರಿಗೆ ಇಲಾಖೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹೇಳಿಕೆ ನೀಡಿದೆ.
ಈ ಸೇತುವೆಯು ಯುನ್ನಾನ್‌ನ ಕ್ಸುವಾನ್ವಿಯಿಂದ ಗೈರೆವ್‌ನ ಶುಯ್ಚೆಂಗ್‌ಗಳ ನಡುವಿನ ಪ್ರಯಾಣವನ್ನು 4ಕ್ಕೂ ಹೆಚ್ಚು ತಾಸುಗಳಿಂದ ಸುಮಾರು ಒಂದು ತಾಸಿಗೆ ಇಳಿಸುತ್ತದೆಂದು ಗುರುವಾರ ಸೇತುವೆ ಉದ್ಘಾಟನೆಯ ಬಳಿಕ ದುವಾನ್ ಎಂಬ ಟ್ರಕ್ ಚಾಲಕ ತಿಳಿಸಿದನೆಂದು ಅಧಿಕೃತ ಸುದ್ದಿಸಂಸ್ಥೆ ಕ್ಸಿನುವಾ ವರದಿ ಮಾಡಿದೆ.
ಈ 1,341 ಮೀಟರ್ ಉದ್ದದ ಸೇತುವೆಗೆ 1 ಶತಕೋಟಿ ಯುವಾನ್(14.4 ಕೋಟಿ ಡಾಲರ್) ವೆಚ್ಚ ತಗಲಿದೆಯೆಂದು ಸ್ಥಳೀಯ ಪತ್ರಿಕೆ ‘ಗೈರೆವ್ ಡೈಲಿ’ ತಿಳಿಸಿದೆ.