ಅಪರಾಧ ಕೃತ್ಯಕ್ಕೆ ಸಂಚು: ಮೂವರ ಸೆರೆ
ಮಂಗಳೂರು, ಡಿ.30: ನಗರದ ಮಣ್ಣಗುಡ್ಡೆಯ ದುರ್ಗಾ ಮಹಲ್ ಜಂಕ್ಷನ್ ಬಳಿ ಮೂವರನ್ನು ಬರ್ಕೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಆರೋಪಿಗಳು ಯಾವುದೋ ದುಷ್ಕೃತ್ಯ ನಡೆಸಲು ಸಂಚು ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ಎಯ್ಯಡಿ ಕೊಂಚಾಡಿಯ ಸಂಪತ್ ಕುಮಾರ್ (36), ಕೊಟ್ಟಾರದ ಹರೀಶ್ ಶೆಟ್ಟಿ (49), ಅಶೋಕನಗರದ ವಿಲ್ಫ್ರೆಡ್ ಅವಿನಾಶ್ ಸೋನ್ಸ್(32) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ಕೆಎ 03 ಪಿ. 7398 ಮತ್ತು ಕೆಎ 15 ಎಂ. 2282 ನಂಬ್ರದ ಕಾರುಗಳು, ಗ್ಯಾಸ್ ವೆಲ್ಡಿಂಗ್ ಸಿಲಿಂಡರ್, ಪೈಪ್ ಮತ್ತು ಇತರ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 4,60,500 ರೂ. ಎಂದು ಅಂದಾಜಿಸಲಾಗಿದೆ.
ಆರೋಪಿಗಳ ಬಳಿ ಕಾರಿನ ಸೂಕ್ತ ದಾಖಲಾತಿ ಇರಲಿಲ್ಲ. ಅಲ್ಲದೆ ಕಾರಿನ ಬಗ್ಗೆಯೂ ಸ್ಪಷ್ಟ ಮಾಹಿತಿ ನೀಡಲಿಲ್ಲ. ಆರೋಪಿಗಳು ಯಾವುದೋ ಅಪರಾಧ ಕೃತ್ಯ ನಡೆಸಲು ಸಂಚು ರೂಪಿಸುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿಗಳು ಕಾರಿನ ಚಾಸಿಸ್ ನಂಬ್ರ ಇರುವ ಚಾಸಿಸ್‌ನ ತುಂಡನ್ನು ತೆಗೆದು ಯಾವುದೋ ಮೂಲದಿಂದ ಬಂದ ಕಾರಿಗೆ ಅಳವಡಿಸಿ ಮಾರಾಟ ಮಾಡುವ ದಂಧೆಯಲ್ಲಿ ತೊಡಗಿರುವ ಬಗ್ಗೆಯೂ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಮಂಗಳೂರು ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಉದಯ್ ನಾಯಕ್, ಬರ್ಕೆ ಠಾಣೆಯ ಇನ್‌ಸ್ಪೆಕ್ಟರ್ ರಾಜೇಶ್ ಎ.ಕೆ., ಅಪರಾಧ ವಿಭಾಗದ ಎಸ್ಸೈ ನರೇಂದ್ರ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಸ್ಸೈ ಪ್ರಕಾಶ್ ಕುಮಾರ್, ಎಎಸ್ಸೈ ಪ್ರಕಾಶ್ ಕೆ., ರುಕ್ಮಯ್ಯೆ, ಸಿಬ್ಬಂದಿ ವರ್ಗದ ಗಣೇಶ್, ನಾಗರಾಜ್, ಮಹೇಶ್, ರಾಜೇಶ್, ಕಿಶೋರ್, ಜಯರಾಮ್ , ಕಿಶೋರ್ ಕೋಟ್ಯಾನ್ ಪಾಲ್ಗೊಂಡಿದ್ದರು.