ಮೂಡುಬಿದಿರೆ : ಸರಕಾರಿ ಸಂಯುಕ್ತ ಪ್ರೌಢಶಾಲೆಯ ದಶಮಾನೋತ್ಸವ

Update: 2016-12-30 13:32 GMT

ಮೂಡುಬಿದಿರೆ, ಡಿ.30 : ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗೆ ಕಳುಹಿಸುವ ಪೋಷಕರೇ ನಿಜವಾದ ಕನ್ನಡಾಭಿಮಾನಿಗಳು. ಮುಳಿಹುಲ್ಲಿನ ಮಾಡಿನಿಂದ ಆರಂಭಗೊಂಡು ಇದೀಗ ಉತ್ತಮ ಕಟ್ಟಡದೊಂದಿಗೆ ಉನ್ನತ ಹಂತಕ್ಕೆ ಈ ಶಾಲೆಯು ಬರಲು ಊರವರೇ ಕಾರಣೀಕರ್ತರು. ದಶಮಾನೋತ್ಸವದಂಗವಾಗಿ ಈ ಶಾಲೆಗೆ 2 ಕೊಠಡಿಗಳನ್ನು ಒದಗಿಸುವಂತೆ ಈಗಾಗಲೇ ಶಿಕ್ಷಣ ಸಚಿವರಿಗೆ ಮನವಿಯನ್ನು ನೀಡಲಾಗಿದ್ದು, ಇದಕ್ಕೆ ಮುತುವರ್ಜಿ ವಹಿಸಿ ಪ್ರಯತ್ನಿಸುವ ಮೂಲಕ ಕನ್ನಡ ಮಾಧ್ಯಮ ಶಾಲೆಗೆ ಶಕ್ತಿ ತುಂಬುವಂತಹ ಕೆಲಸವನ್ನು ಮಾಡಲಾಗುವುದು ಎಂದು ಶಾಸಕ ಕೆ.ಅಭಯಚಂದ್ರ ಜೈನ್ ಹೇಳಿದರು.

 ಅವರು ನೀರ್ಕೆರೆ ಸರಕಾರಿ ಸಂಯುಕ್ತ ಪ್ರೌಢಶಾಲೆಯ ದಶಮಾನೋತ್ಸವದಂಗದ ಅಧ್ಯಕ್ಷತೆಯನ್ನು ವಹಿಸಿ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದರು.

ಶಾಲೆ ಬೆಳೆಯುವಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರ ಸಹಕಾರವೂ ಕಾರಣವಾಗಿದೆ. ಈ ಶಾಲೆಯಲ್ಲಿ ವಿದ್ಯೆಯನ್ನು ಕಲಿತು ಉನ್ನತ ಸ್ಥಾನಮಾನಕ್ಕೆ ಹೋದವರಿದ್ದಾರೆ ಎಂದು ಶ್ಲಾಘಿಸಿದ ಅವರು,  ಊರವರ ಪಿಯು ಕಾಲೇಜಿನ ಕನಸು ನನಸಾಗಲಿ ಎಂದು ಶುಭ ಹಾರೈಸಿದರು.

  ಜಿ.ಪಂ ಸದಸ್ಯ ಕೆ.ಪಿ ಸುಚರಿತ ಶೆಟ್ಟಿ, ತೆಂಕಮಿಜಾರು ಗ್ರಾ.ಪಂ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ, ಶ್ರೀ.ಕ್ಷೇ.ಧ.ಗ್ರಾಮಾಭಿವೃದ್ಧಿ ಯೋಜನೆ ಕಾರ್ಕಳ ಇದರ ಯೋಜನಾಧಿಕಾರಿ ಕೃಷ್ಣ ಟಿ, ಶಿಕ್ಷಣ ಸಂಯೋಜಕ ದೇವದಾಸ್, ದಿನೇಶ, ತೆಂಕಮಿಜಾರು ಪಿಡಿಓ ಸಾಯೀಶ ಚೌಟ, ಹಿ.ಪ್ರಾ.ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಗಿರೀಶ್ ಗೌಡ, ತಾ.ಪಂ ಮಾಜಿ ಸದಸ್ಯ ಎಂ.ಜಿ ಮಹಮ್ಮದ್, ಉದ್ಯಮಿಗಳಾದ ಅಬ್ದುಲ್ ಲತೀಫ್, ದುಗ್ಗೋಡಿ ಉಸ್ಮಾನ್ , ವಿದ್ಯಾರ್ಥಿ ನಾಯಕಿ ವೈಷ್ಣವಿ ಉಪಸ್ಥಿತರಿದ್ದರು.

  ಕಳೆದ 10 ವರ್ಷಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿ ಶಾಲೆಗೆ ಕೀರ್ತಿಯನ್ನು ತಂದಿರುವ ತೇಜಾಕ್ಷಿ, ಶ್ರೀರಕ್ಷಾ, "ವೀರಬಾಲಕ" ಜನಾರ್ದನ ಹಾಗೂ ಅನ್ವಿತಾ ಅವರನ್ನು, ಗ್ರಂಥಾಲಯದ ನಿರ್ಮಾಣಕ್ಕೆ ಸಹಕರಿಸಿರುವ ಮೂಡುಬಿದಿರೆ ಇನ್ನರ್ ವೀಲ್ ಕ್ಲಬ್‌ನ ರತ್ನಾ ಪಾರಡ್ಕರ್ ಮತ್ತು ವೀಣಾ ರತ್ನರಾಜ್ ಹಾಗೂ ಊರಿನ ದಾನಿಗಳನ್ನು, ಶಾಲೆಯ ಸ್ಥಾಪಕ ಸದಸ್ಯರನ್ನು, ಶಾಲೆಯಲ್ಲಿ ಸೇವೆ ಸಲ್ಲಿಸಿರುವ 7 ಜನ ಹಿರಿಯ ನಿವೃತ್ತ ಹಾಗೂ ವರ್ಗಾವಣೆಗೊಂಡಿರುವ ಶಿಕ್ಷಕರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

 ದಶಮಾನೋತ್ಸವ ಸಮಿತಿಯ ಅಧ್ಯಕ್ಷ ರಮೇಶ್ ಮರಿಯಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.

ಶಿಕ್ಷಕ ಓಸ್ವಾಲ್ ಕಿಶೋರ್ ಬಹುಮಾನಿತರ ಪಟ್ಟಿ ಓದಿದರು.

ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಡಾ.ಪ್ರತಿಮಾ ಹಾಗೂ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಯಮುನಾ ತಮ್ಮ ತಮ್ಮ ಶಾಲೆಯ ವರದಿಗಳನ್ನು ವಾಚಿಸಿದರು.

ಶಾಲೆಯ ವಾದಿರಾಜ ಕಲ್ಲೂರಾಯ ಮತ್ತು ರಾಕೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News