ಬ್ರಹ್ಮನಗರದಲ್ಲಿ ಬಾಲಕಾರ್ಮಿಕ ನಿಷೇಧ ಕಾನೂನು ಅರಿವು ಕಾರ್ಯಕ್ರಮ
ಪುತ್ತೂರು , ಡಿ.30 : ನಗರಸಭಾ ವ್ಯಾಪ್ತಿಯ ಬ್ರಹ್ಮನಗರ ದಲಿತ ಕಾಲೊನಿಯಲ್ಲಿ ಕಾರ್ಮಿಕ ಇಲಾಖೆಯ ವತಿಯಿಂದ ಬಾಲಕಾರ್ಮಿಕ ನಿಷೇಧ ಕಾಯಿದೆ ಮತ್ತು ನಿಯಂತ್ರಣ ಕಾಯಿದೆ ಕುರಿತು ಅರಿವು ಕಾರ್ಯಕ್ರಮ ಗುರುವಾರ ನಡೆಯಿತು.
ಇಲ್ಲಿನ ಶ್ರೀದುಗಾ ಮಾರಿಯಮ್ಮ ಗುಡಿಯ ವಠಾರದಲ್ಲಿ ನಡೆದ ಕಾರ್ಯಕ್ರಮವನ್ನು ನಗರಸಭಾ ಸದಸ್ಯ ಶಕ್ತಿ ಸಿನ್ಹಾ ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಮಿಕ ಇಲಾಖೆಯ ತಾಲೂಕು ಸೀನಿಯರ್ ಲೇಬರ್ ಇನ್ಸ್‌ಪೆಕ್ಟರ್ ರಾಮಚಂದ್ರ ಎಚ್ ಕಾರ್ಮಿಕ ಕಾನೂನುಗಳ ಕುರಿತು ಮಾಹಿತಿ ನೀಡಿದರು.
ಬಾಲಕಾರ್ಮಿಕ ಕಾಯಿದೆ 1986ರಲ್ಲಿ ರಚನೆಗೊಂಡಿದ್ದು, ಇದೀಗ ಕೇಂದ್ರ ಸರ್ಕಾರ ಕಾಯಿದೆಯಲ್ಲಿ ತಿದ್ದುಪಡಿಗೊಳಿಸಿ ಬಾಲ ಮತ್ತು ಕಿಶೋರ ನಿಷೇಧ ಮತ್ತು ನಿಯಂತ್ರಣ ಕಾಯಿದೆ ಎಂದು ಬದಲಾವಣೆಗೊಳಿಸಿದೆ. ಈ ಕಾಯಿದೆಯಂತೆ 18 ವರ್ಷದ ಒಳಗಿನ ಮಕ್ಕಳು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸ ಮಾಡುವಂತಿಲ್ಲ ಎಂಬ ನಿಯಮಾವಳಿ ರೂಪಿಸಲಾಗಿದೆ ಎಂದರು.
ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ದಮಯಂತಿ ಬಾಲ್ಯ ವಿವಾಹ ನಿಷೇಧ ಕಾಯಿದೆ ಬಗ್ಗೆ ಮಾಹಿತಿ ನೀಡಿದರು.
ರೇಷ್ಮೆ ಇಲಾಖೆಯ ರೇಷ್ಮೆ ಪ್ರದರ್ಶಕ ಆರ್.ಎಸ್. ನಾಯ್ಕೆ, ಸ್ಥಳೀಯ ಮುಖಂಡರಾದ ಅಶೋಕ್ ಮತ್ತು ಸೋಮವಾನಾಥ ಉಪಸ್ಥಿತರಿದ್ದರು.
ಕಾರ್ಮಿಕ ಇಲಾಖೆಯ ನಿವೃತ್ತ ಸಿಬ್ಬಂದಿ ಚಿದಾನಂದ ಕಾಮತ್ ಕಾಸರಗೋಡು ಸ್ವಾಗತಿಸಿ, ವಂದಿಸಿದರು.