×
Ad

ಗುರುತಿನ ಚೀಟಿ ಸಿಗದ ವ್ಯಾಪಾರಿಗಳ ಬೀದಿಬದಿ ತೆರವು

Update: 2016-12-30 19:52 IST

ಮಂಗಳೂರು, ಡಿ.30: ನಗರದ ಲೇಡಿಗೋಷನ್ ಬಳಿ ಪ್ರತ್ಯೇಕವಾಗಿ ಮೀಸಲಿಟ್ಟ ವಲಯದಲ್ಲಿ ಬೀದಿ ಬದಿ ವ್ಯಾಪಾರಿಗಳು ವ್ಯವಹಾರ ಆರಂಭಿಸಿದ್ದಾರೆ. ಈ ಮಧ್ಯೆ ಗುರುತಿನ ಚೀಟಿ ಲಭ್ಯವಾಗದ ಕಾರಣ ನಗರದ ಸ್ಟೇಟ್‌ಬ್ಯಾಂಕ್ ಪರಿಸರದಲ್ಲಿ ವ್ಯಾಪಾರ ಮಾಡುತ್ತಿದ್ದ ಬೀದಿ ಬದಿ ವ್ಯಾಪಾರಿಗಳನ್ನು ಮನಪಾ ಅಧಿಕಾರಿಗಳು ಶುಕ್ರವಾರ ತೆರವುಗೊಳಿಸಿದ್ದಾರೆ.

ಕಳೆದ ಹಲವಾರು ವರ್ಷಗಳ ಹೋರಾಟದ ಫಲವಾಗಿ ಮನಪಾ ಈ ತಿಂಗಳ ಮೊದಲ ವಾರದಲ್ಲಿ ಪ್ರತ್ಯೇಕ ಜಾಗ ಮೀಸಲಿಟ್ಟಿತ್ತು. ಅಲ್ಲಿ ಕೆಲವೊಂದು ಕಾಮಗಾರಿ ಬಾಕಿಯಿದ್ದರಿಂದ ಗುರುತಿನ ಚೀಟಿ ಕೈಸೇರಿದ್ದರೂ ವ್ಯಾಪಾರ ಮಾಡಲು ಆಗಿರಲಿಲ್ಲ. ಇದೀಗ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಗುರುತಿನ ಚೀಟಿ ಲಭ್ಯವಾದ ಬೀದಿ ಬದಿ ವ್ಯಾಪಾರಿಗಳ ಪೈಕಿ 138 ಮಂದಿ ಗುರುವಾರ ವ್ಯಾಪಾರ ಆರಂಭಿಸಿದ್ದಾರೆ. ಆದರೆ ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ಇಲ್ಲದ್ದರಿಂದ ವ್ಯಾಪಾರ ತೀರಾ ಕಡಿಮೆಯಾಗಿತ್ತು. ಶುಕ್ರವಾರ ಗುರುತಿನ ಚೀಟಿ ಪಡೆದ 98 ಮಂದಿ ವ್ಯಾಪಾರ ನಡೆಸಿದ್ದಾರೆ.

 ಮನಪಾ ಸದ್ಯ 208 ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಿದೆ. ಇನ್ನೂ 350 ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲಿದೆ. ಶುಕ್ರವಾರ ಸ್ಟೇಟ್‌ಬ್ಯಾಂಕ್ ಪರಿಸರದ ಗುರುತಿನ ಚೀಟಿ ಸಿಗದ ವ್ಯಾಪಾರಿಗಳನ್ನು ಮಾತ್ರ ಮನಪಾ ತೆರವುಗೊಳಿಸಿದೆ. ಗುರುತಿನ ಚೀಟಿ ಸಿಕ್ಕಿಯೂ ಮೀಸಲು ವಲಯಕ್ಕೆ ತೆರಳಲಿಲ್ಲ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಅದು ಸರಿಯಲ್ಲ. ಗುರುತಿನ ಚೀಟಿ ಸಿಗದವರಿಗೆ ಶೀಘ್ರ ಗುರುತಿನ ಚೀಟಿ ಸಿಗುವಂತೆ ಪ್ರಯತ್ನಿಸಲಾಗುವುದು ಎಂದು ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಆರ್.ಎಸ್. ತಿಳಿಸಿದ್ದಾರೆ.


ಕರಪತ್ರ ಅಭಿಯಾನ:

ಗುರುತಿನ ಚೀಟಿ ಪಡೆದು ಮೀಸಲು ವಲಯದಲ್ಲಿರುವ ವ್ಯಾಪಾರಿಗಳಿಗೆ ವ್ಯಾಪಾರ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಮುಂದಿನ ವಾರ ನಗರದಲ್ಲಿ ಕರಪತ್ರ ಅಭಿಯಾನ ಮಾಡಲಾಗುವುದು ಎಂದು ಸಂಘದ ಗೌರವಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News