ಮೀನುಗಾರಿಕಾ ನಿಯಮ ರೂಪಿಸಲು ಶೃಂಗಸಭೆ: ಸಚಿವ ಪ್ರಮೋದ್

Update: 2016-12-30 15:01 GMT

ಉಡುಪಿ, ಡಿ.30: ಮೀನುಗಾರರು ಮತ್ತು ಮತ್ಸ್ಯ ಸಂಪತ್ತು ಉಳಿವಿಗಾಗಿ ಕಠಿಣ ಮೀನುಗಾರಿಕಾ ನಿಯಮ ರೂಪಿಸುವ ನಿಟ್ಟಿನಲ್ಲಿ ದೇಶದ 10 ರಾಜ್ಯಗಳ ಮೀನುಗಾರಿಕಾ ಮಂತ್ರಿಗಳ ಶೃಂಗಸಭೆಯನ್ನು ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 90 ಮಂದಿ ಮೀನುಗಾರರಿಗೆ ಹೊಸ ಬೋಟಿನ ನಿರ್ಮಾಣಕ್ಕಾಗಿ ಸಾಧ್ಯತಾ ಪತ್ರವನ್ನು ಶುಕ್ರವಾರ ಉಡುಪಿ ತಾಪಂ ಸಭಾಂಗಣದಲ್ಲಿ ವಿತರಿಸಿ ಅವರು ಮಾತನಾಡುತಿದ್ದರು.

ಮೀನುಗಾರಿಕೆ ಸ್ವಉದ್ಯೋಗ ಕಲ್ಪಿಸುವ ಬಹುದೊಡ್ಡ ಕ್ಷೇತ್ರವಾಗಿದೆ. ಮೀನುಗಾರ ಯುವಕರಿಗೆ ಈ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರದ ಬಗ್ಗೆ ಅನುಭವವೂ ಇಲ್ಲ, ಆಸಕ್ತಿಯೂ ಇಲ್ಲ. ಆದುದರಿಂದ ಮೀನುಗಾರ ಯುವಕರಿಗೆ ಬೋಟು ಮಾಲಕರಾಗಿ ಸ್ವಾವಲಂಬಿಗಳಾಗಿ ಬದುಕಬೇಕೆಂಬ ಗುರಿ ಇದೆ. ಆದರೆ ಸಾಧ್ಯತಾ ಪತ್ರ ನೀಡಲು ಇದ್ದ ಕಠಿಣ ಕ್ರಮದಿಂದ ಅದು ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿ ಲಕ್ಷಾಂತರ ರೂ. ಲಂಚ ನೀಡುವ ವ್ಯವಸ್ಥೆ ಇತ್ತು ಎಂದು ಅವರು ಆರೋಪಿಸಿದರು.

ಇದೀಗ ಸಾಧ್ಯತಾ ಪತ್ರಕ್ಕೆ ನೀಡುವ ನಿಯಮವನ್ನು ಸರಳೀಕರಿಸಿ 2016ರ ನ.21ರ ಮೊದಲು ಅರ್ಜಿ ಹಾಕಿದ ಎಲ್ಲರಿಗೂ ಸಾಧ್ಯತಾ ಪತ್ರ ನೀಡುವಂತೆ ಆದೇಶ ಹೊರಡಿಸಲಾಗಿದೆ. ಅದರಂತೆ ಪ್ರಥಮ ಹಂತದಲ್ಲಿ 90 ಮಂದಿಗೆ ನೀಡಲಾಗುತ್ತಿದೆ. ಮಾರಾಟ ಮಾಡಿದ ಬೋಟನ್ನು ಇನ್ನೊಬ್ಬರ ಹೆಸರಿಗೆ ವರ್ಗಾವಣೆ ಮಾಡಲು ಇದ್ದ ಅವಧಿಯನ್ನು 2 ವರ್ಷದಿಂದ ಆರು ತಿಂಗಳಿಗೆ ಇಳಿಸಲಾಗಿದೆ. ಮರದ ಬೋಟನ್ನು ಸ್ಟೀಲ್ ಬೋಟ್ ಆಗಿ ಪರಿವರ್ತಿಸಲು ಇದ್ದ ಅವಧಿಯನ್ನು 20 ವರ್ಷದಿಂದ 5 ವರ್ಷಕ್ಕೆ ಇಳಿಕೆ ಮಾಡಲಾಗಿದೆ ಎಂದರು.

ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಸವಿತಾ ಖಾದ್ರಿ ಉಪಸ್ಥಿತರಿದ್ದರು. ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಪಾರ್ಶ್ವನಾಥ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News