×
Ad

ಅಮೆರಿಕದ ಮೂಲಕ ಹಾದು ಹೋಗುವ ತೈವಾನ್ ಅಧ್ಯಕ್ಷೆ

Update: 2016-12-30 21:06 IST

ತೈಪೆ, ಡಿ. 30: ತೈವಾನ್ ಅಧ್ಯಕ್ಷೆ ತ್ಸಾಯಿ ಇಂಗ್ ವೆನ್ ಜನವರಿಯಲ್ಲಿ ಲ್ಯಾಟಿನ್ ಅಮೆರಿಕ ದೇಶಗಳ ಪ್ರವಾಸ ಕೈಗೊಳ್ಳುವ ವೇಳೆ ಹೂಸ್ಟನ್ ಮತ್ತು ಸ್ಯಾನ್‌ಫ್ರಾನ್ಸಿಸ್ಕೊ ನಗರಗಳ ಮೂಲಕ ಹಾದು ಹೋಗಲಿದ್ದಾರೆ ಎಂದು ಅವರ ಕಚೇರಿ ಶುಕ್ರವಾರ ಪ್ರಕಟಿಸಿದೆ.

ಇದು ಚೀನಾದ ಆಕ್ರೋಶಕ್ಕೆ ಕಾರಣವಾಗಲಿದೆ. ಅಮೆರಿಕದ ಮೂಲಕ ಹಾದು ಹೋಗಲು ತೈವಾನ್ ಅಧ್ಯಕ್ಷೆಗೆ ಅವಕಾಶ ನೀಡಬೇಡಿ ಎಂಬುದಾಗಿ ಒಂದು ದಿನದ ಹಿಂದೆಯಷ್ಟೇ ಚೀನಾ ಅಮೆರಿಕವನ್ನು ಒತ್ತಾಯಿಸಿರುವುದನ್ನು ಸ್ಮರಿಸಬಹುದಾಗಿದೆ.

ತನ್ನ ಪ್ರವಾಸದ ವೇಳೆ ತ್ಸಾಯಿ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ತಂಡದ ಸದಸ್ಯರನ್ನು ಭೇಟಿಯಾಗುವರೇ ಎಂಬ ಮಾಹಿತಿ ನೀಡಲು ಅವರ ಕಚೇರಿ ನಿರಾಕರಿಸಿದೆ. ಆದರೆ, ಈ ಭೇಟಿ ಖಾಸಗಿ ಮತ್ತು ಅನಧಿಕೃತವಾಗಿದೆ ಎಂಬುದಾಗಿ ತೈವಾನ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಹೇಳಿದೆ.

ದಶಕಗಳ ಕಾಲದ ಶಿಷ್ಟಾಚಾರವನ್ನು ಮುರಿದು ತೈವಾನ್ ಅಧ್ಯಕ್ಷೆಯೊಂದಿಗೆ ಫೋನ್‌ನಲ್ಲಿ ಮಾತನಾಡುವ ಮೂಲಕ ಟ್ರಂಪ್ ಈ ತಿಂಗಳ ಆದಿ ಭಾಗದಲ್ಲಿ ಚೀನಾದ ಕೆಂಗಣ್ಣಿಗೆ ಗುರಿಯಾಗಿರುವುದನ್ನು ಸ್ಮರಿಸಬಹುದಾಗಿದೆ.

ಬೀಜಿಂಗ್‌ನ ‘ಅಖಂಡ ಚೀನಾ’ ನೀತಿಯನ್ನು ತಾನು ಅನುಸರಿಸುವುದು ಕಷ್ಟ ಎಂಬ ಸೂಚನೆಯನ್ನು ಟ್ರಂಪ್ ಆಡಳಿತ ಈಗಾಗಲೇ ಚೀನಾಕ್ಕೆ ನೀಡಿದೆ.
ತೈವಾನ್‌ನ ನೂತನ ಅಧ್ಯಕ್ಷೆಯ ಬಗ್ಗೆ ಚೀನಾ ದಟ್ಟ ಅನುಮಾನಗಳನ್ನು ಹೊಂದಿದೆ. ಆಕೆ ತೈವಾನ್‌ಗೆ ಚೀನಾದಿಂದ ಔಪಚಾರಿಕ ಸ್ವಾತಂತ್ರವನ್ನು ಘೋಷಿಸಿಕೊಳ್ಳಬಹುದು ಎಂಬ ಭೀತಿಯನ್ನು ಚೀನಾ ಹೊಂದಿದೆ. ತೈವಾನ್ ಈಗ ಸ್ವ-ಆಡಳಿತದ ದ್ವೀಪವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News