ಸಚಿವ ಆಂಜನೇಯರ ‘ಗ್ರಾಮ ವಾಸ್ತವ್ಯ’ಕ್ಕೆ ಕಾದಿದೆ ಮರ್ಲಿ ಕುಟುಂಬ
ಕಾಲ್ತೋಡು (ಬೈಂದೂರು), ಡಿ.30: ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು ನಾಳೆ ಹೊಸ ವರ್ಷದ ಸಂದರ್ಭದಲ್ಲಿ ‘ಗ್ರಾಮ ವಾಸ್ತವ್ಯ’ ನಡೆಸುವ ಕುಂದಾಪುರ ತಾಲೂಕು ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಲ್ತೊಂಡು ಗ್ರಾಪಂನ ಮೂರೂರು ಗ್ರಾಮ ಸಚಿವರ ಸ್ವಾಗತಕ್ಕಾಗಿ ಸಜ್ಜುಗೊಂಡು ಕಾಯುತ್ತಿದೆ.
ಒಟ್ಟು ಎಂಟು ಕೊರಗ ಕುಟುಂಬಗಳು ನೆಲೆಸಿರುವ ಮೂರೂರು ಗ್ರಾಮದಲ್ಲಿ ರುವ ಮರ್ಲಿ ಕೊರಗ ಕುಟುಂಬದೊಂದಿಗೆ ಈ ಬಾರಿ ಹೊಸ ವರ್ಷದ ಸಂದರ್ಭದಲ್ಲಿ ಗ್ರಾಮ ವಾಸ್ತವ್ಯಕ್ಕೆ ಸಚಿವರು ನಿರ್ಧರಿಸಿದ್ದು, 70 ವರ್ಷ ಪ್ರಾಯದ ಮರ್ಲಿ ಅವರು ತನ್ನೊಂದಿಗಿರುವ ನಾಲ್ವರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನೊಂದಿಗೆ ಸಚಿವರಿಗಾಗಿ ಎದುರು ನೋಡುತ್ತಿದ್ದಾರೆ.
ಸಚಿವರು ನಾಳೆ ಜಿಲ್ಲೆಯಲ್ಲಿ ತಮ್ಮ ಇತರ ಕಾರ್ಯಕ್ರಮಗಳನ್ನು ಮುಗಿಸಿ 11:30ರ ಸುಮಾರಿಗೆ ಕಾಲ್ತೋಡು ಗ್ರಾಪಂ ವ್ಯಾಪ್ತಿಯ ಮೂರೂರು ಗ್ರಾಮಕ್ಕೆ ಆಗಮಿಸಲಿದ್ದು, ಅಲ್ಲಿ ತೆರೆದ ಬಯಲಿನಲ್ಲಿ ಆಯೋಜಿಸಲಾಗಿರುವ ವಿವಿಧ ಕಾರ್ಯಕ್ರಮಗಳಲ್ಲಿ ಸಂಜೆಯವರೆಗೆ ಪಾಲ್ಗೊಂಡು, ಕೊರಗರು ಸೇರಿದಂತೆ ಪರಿಶಿಷ್ಟ ಪಂಗಡದವರಿಗೆ ಐಟಿಡಿಪಿ ವತಿಯಿಂದ ನೀಡಲಾಗುವ ವಿವಿಧ ಸೌಲಭ್ಯಗಳನ್ನು ವಿತರಿಸಿ, ಅವರೊಂದಿಗೆ ಸಂವಾದ ನಡೆಸಿ, ಜಿಲ್ಲೆಯ ಮೂಲನಿವಾಸಿಗಳಾದ ಕೊರಗರು ಪ್ರದರ್ಶಿಸುವ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ವೀಕ್ಷಿಸಿ ಸಂಜೆ 7:00 ಗಂಟೆಯ ಸುಮಾರಿಗೆ ಅಲ್ಲಿಂದ ಅರ್ಧ ಕಿ.ಮೀ.ದೂರದಲ್ಲಿರುವ ಮರ್ಲಿ ಕೊರಗ ಅವರ ಮನೆಗೆ ತೆರಳುವರು.
ಬಳಿಕ ಅಲ್ಲಿಯೇ ಕೊರಗರೊಂದಿಗೆ ಉಭಯಕುಶಲೋಪರಿ ಮಾತನಾಡಿ, ಮನೆಯ ಸದಸ್ಯರೊಂದಿಗೆ ಅವರೇ ತಯಾರಿಸಿದ ಸಸ್ಯಾಹಾರಿ ಊಟ ಮಾಡುವರು. ಅಲ್ಲಿ ಕೊರಗರ ಕೇರಿಯ ಕೊರಗರೊಂದಿಗೆ ಮಧ್ಯರಾತ್ರಿ ಯವರೆಗೆ ‘ಪಟ್ಟಾಂಗ’ ನಡೆಸಿ ಹೊಸವರ್ಷದ ಸಂಭ್ರಮವನ್ನು ಆ ಕುಟುಂಬ ದೊಂದಿಗೆ ಆಚರಿಸಿ, ಅಲ್ಲಿಯೇ ಮಲಗುವರು. ಬೆಳಗ್ಗೆ ಎದ್ದು ನಿತ್ಯಕರ್ಮಗಳನ್ನು ಪೂರೈಸಿ, ಅವರು ನೀಡುವ ಉಪಹಾರವನ್ನು ಸೇವಿಸಿ ಅಲ್ಲಿಂದ ನಿರ್ಗಮಿಸುವರು ಎಂದು ಐಟಿಡಿಪಿ ಇಲಾಖೆಯ ಅಧಿಕಾರಿ ಹರೀಶ್ ಗಾಂವ್ಕರ್ ತಿಳಿಸಿದರು.
ಸಚಿವರು ಹೊಸವರ್ಷದಂದು ವಾಸ್ತವ್ಯ ಮಾಡುವ ಮರ್ಲಿ ಕೊರಗ ಅವರ ಮನೆ ಐಟಿಡಿಪಿಯಿಂದ, ಅದರಿಂದಲೇ ದೊರೆತ 18 ಸೆನ್ಸ್ ಜಾಗದಲ್ಲಿ ನಿರ್ಮಿಸಲಾಗಿದೆ. ಜೀವನದಲ್ಲಿ ಏಳು ದಶಕಗಳನ್ನು ಕಂಡಿರುವ ಮರ್ಲಿ ಅವರು ಮೊದಲು ಕೃಷಿ ಕೂಲಿ ಕೆಲಸ ಮಾಡುತಿದ್ದರು. ಅವರ ಗಂಡ ಮರ್ಲ ತೀರಿಕೊಂಡು ಎರಡು ದಶಕಗಳೇ ಕಳೆದಿವೆ. ಅವರು ಮೂವರು ಗಂಡು ಹಾಗೂ ನಾಲ್ವರು ಹೆಣ್ಣು ಮಕ್ಕಳನ್ನು ಹೊಂದಿದ್ದಾರೆ.
ಇವರಲ್ಲಿ ಹಿರಿಯ ಮಗಳು ಲಕ್ಷ್ಮೀ ಪಕ್ಕದಲ್ಲೇ ಗಂಡನೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದರೆ, ಉಳಿದ ಮೂವರು ಹೆಣ್ಣು ಮಕ್ಕಳಲಾದ ಬಾಬಿ, ಗುಲಾಬಿ ಹಾಗೂ ಸುಶೀಲಾ ಮತ್ತು ಅವರ ಮಕ್ಕಳೊಂದಿಗೆ ಮೂಲ ಮನೆಯಲ್ಲಿ ವಾಸವಾಗಿದ್ದಾರೆ. ಎರಡನೇ ಮಗ ನಾರಾಯಣನೂ ಇವರೊಂದಿಗಿದ್ದಾರೆ. ಇವರೆಲ್ಲರೂ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತಿದ್ದಾರೆ. ಮೊದಲ ಮಗ ಗಣಪ ಹಾಗೂ ಇನ್ನೂ ಮದುವೆಯಾಗದ ಕಿರಿಯ ಮಗ ವೆಂಕಟೇಶ ಹೊರ ಊರುಗಳ ಹೊಟೇಲ್‌ಗಳಲ್ಲಿ ದುಡಿಯುತಿದ್ದಾರೆ.
ಮರ್ಲಿ ಅವರ ಹಿರಿಯ ಮಗ ಗಣಪನನ್ನು ಹೊರತು ಪಡಿಸಿ ಉಳಿದವರೆಲ್ಲರೂ 3ರಿಂದ 7ನೇ ತರಗತಿಯವರೆಗೆ ಕಲಿತಿದ್ದಾರೆ. ಸುಶೀಲಾ ಎಸ್ಸೆಸೆಲ್ಸಿಯವರಿಗೆ ಶಾಲೆಗೆ ಹೋಗಿದ್ದಾರೆ. ಇನ್ನು ಇವರ ಮಕ್ಕಳೆಲ್ಲರೂ ಸಮೀಪ ದಲ್ಲಿರುವ ಕಪ್ಪಾಡಿಯಲ್ಲಿ ಹಿರಿಯ ಪ್ರಾಥಮಿಕ ಹಾಗೂ ಅರೆಶಿರೂರಿನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮಾಡುತಿದ್ದರು. ಗಣಪನ ಇಬ್ಬರು ಗಂಡುಮಕ್ಕಳು ದೂರದ ಹೈದರಾಬಾದ್ ಹಾಗೂ ಜಮಖಂಡಿ ಹೊಟೇಲ್‌ಗಳಲ್ಲಿ ದುಡಿಯುತಿದ್ದಾರೆ ಎಂದು ಮರ್ಲಿ ಹಾಗೂ ಸುಶೀಲ ತಿಳಿಸಿದರು.
ಮೂರೂರು ಎಂಬುದು ಕಾಲ್ತೋಡು ಗ್ರಾಪಂನಿಂದ ಸುಮಾರು 10 ಕಿ.ಮೀ. ದೂರದಲ್ಲಿದೆ. ಇಲ್ಲಿಗೆ ಯಾವುದೇ ರಸ್ತೆಯ ವ್ಯವಸ್ಥೆ ಇಲ್ಲಿಯವರೆಗೆ ಇರಲಿಲ್ಲ. ಇದೀಗ ಸಚಿವರ ಆಗಮನಕ್ಕಾಗಿ ಮಣ್ಣಿನ ರಸ್ತೆಯನ್ನು ನಿರ್ಮಿಸಲಾಗಿದೆ. ಮೂರೂರು ಪಕ್ಕದಲ್ಲೇ ಹರಿಯುವ ಹಿಲ್ಕಲ್ ಹೊಳೆಗೆ ಕಿರುಸೇತುವೆ ನಿರ್ಮಾಣಗೊಳ್ಳಬೇಕಾಗಿದೆ. ಐಟಿಡಿಪಿ ವತಿಯಿಂದ ನಿರ್ಮಾಣಗೊಳ್ಳುವ ಈ ಸೇತುವೆಯ ಪಿಲ್ಲರ್ ಎದ್ದಿದ್ದರೂ, ಇನ್ನೂ ಪೂರ್ಣಗೊಂಡಿಲ್ಲ. ಮೂರೂರು ಎಂಬುದು ಕಾಲ್ತೋಡು ಗ್ರಾಪಂನಿಂದ ಸುಮಾರು 10 ಕಿ.ಮೀ. ದೂರದಲ್ಲಿದೆ. ಇಲ್ಲಿಗೆ ಯಾವುದೇ ರಸ್ತೆಯ ವ್ಯವಸ್ಥೆ ಇಲ್ಲಿಯವರೆಗೆ ಇರಲಿಲ್ಲ.
ಇದೀಗ ಸಚಿವರ ಆಗಮನಕ್ಕಾಗಿ ಮಣ್ಣಿನ ರಸ್ತೆಯನ್ನು ನಿರ್ಮಿಸಲಾಗಿದೆ. ಮೂರೂರು ಪಕ್ಕದಲ್ಲೇ ಹರಿಯುವ ಹಿಲ್ಕಲ್ ಹೊಳೆಗೆ ಕಿರುಸೇತುವೆ ನಿರ್ಮಾಣಗೊಳ್ಳಬೇಕಾಗಿದೆ. ಐಟಿಡಿಪಿ ವತಿಯಿಂದ ನಿರ್ಮಾಣಗೊಳ್ಳುವ ಈ ಸೇತುವೆಯ ಪಿಲ್ಲರ್ ಎದ್ದಿದ್ದರೂ, ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಈಗ ಮೂರೂರಿನ ಕೊರಗರು ಕಾಲ್ತೋಡಿಗೆ ತೆರಳಲು 24 ಕಿ.ಮೀ. ಸುತ್ತುಬಳಸಿ ಸಾಗಬೇಕಾಗಿದೆ. ಈ ಸೇತುವೆ ಮುಗಿದು, ಈಗ ರಚಿಸಿರುವ ಮಣ್ಣಿನ ರಸ್ತೆಯಿಂದ ಕಾಲ್ತೋಡು ಎಂಟು ಕಿ.ಮೀ. ಅಷ್ಟೇ ದೂರಕ್ಕಿಳಿಯುತ್ತದೆ. ಹೀಗಾಗಿ ಈಗ ಮೂರೂರಿನ ಕೊರಗರು ಕಾಲ್ತೋಡಿಗೆ ತೆರಳಲು 24 ಕಿ.ಮೀ. ಸುತ್ತುಬಳಸಿ ಸಾಗಬೇಕಾಗಿದೆ.
ಈ ಸೇತುವೆ ಮುಗಿದು, ಈಗ ರಚಿಸಿರುವ ಮಣ್ಣಿನ ರಸ್ತೆಯಿಂದ ಕಾಲ್ತೋಡು ಎಂಟು ಕಿ.ಮೀ.. ಅಷ್ಟೇ ದೂರಕ್ಕಿಳಿಯುತ್ತದೆ.
ಊರಿಗಾಗಿ ಬೇಡಿಕೆ ಪಟ್ಟಿ:
ನಾಳೆ ಸಚಿವರ ಮುಂದೆ ತಮ್ಮ ಬೇಡಿಕೆಯನ್ನೇನಾದರೂ ಇರಿಸುತ್ತೀರಾ ಎಂದು ಪ್ರಶ್ನಿಸಿದರೆ, ಸುಶೀಲಾ ಮತ್ತು ಗುಲಾಬಿ ಮಾತನಾಡಿ, ಮೊದಲು ಕಿರು ಸೇತುವೆಯನ್ನು ಪೂರ್ಣಗೊಳಿಸುವಂತೆ ಕೇಳುತ್ತೇವೆ. ಇನ್ನು ನಮಗೆ ತ್ರಿಫೇಸ್ ವಿದ್ಯುತ್ ನೀಡುವಂತೆ ಕೇಳುತ್ತೇವೆ. ಈಗ ನೀಡಿರುವ ಸಿಂಗಲ್ ಫೇಸ್ ವಿದ್ಯುತ್‌ನಿಂದ ವೊಲ್ಟೇಜ್ ಇಲ್ಲದೇ ಲೈಟ್ ಉರಿಯುವುದೇ ಇಲ್ಲ. ಹೀಗಾಗಿ ಮೊದಲೇ ನೀಡಿರುವ ಸೋಲಾರ್ ಲೈಟೇ ನಮಗೆ ಗತಿ. ಮಳೆಗಾಲದಲ್ಲಿ ಅದು ಇರುವುದಿಲ್ಲ ಎಂದರು.
ನಮ್ಮ ಈ ಕೇರಿಯಲ್ಲಿ ಎರಡು ತೆರೆದ ಬಾವಿಗಳನ್ನು ನಿರ್ಮಿಸಿದ್ದಾರೆ. ಅದರಲ್ಲಿ ಮಾರ್ಚ್ ಬಳಿಕ ನೀರಿರುವುದಿಲ್ಲ. ಆಗ ನಾವು ಪಕ್ಕದಲ್ಲಿರುವ ಮನೆಯಿಂದ ನೀರು ತರಬೇಕು. ನಮಗೆ ಬೇಸಿಗೆಯಲ್ಲೂ ಕುಡಿಯುವ ನೀರನ್ನು ನೀಡುವಂತೆ ಕೇಳುತ್ತೇವೆ. ಇನ್ನು ನಾವು ಕೈಮಗ್ಗದ ನೇಕಾರಿಕೆಯಲ್ಲಿ ತರಬೇತಿ ಪಡೆದಿದ್ದೇವೆ. ನಮಗೆ ಸ್ವಉದ್ಯೋಗ ಕೈಗೊಳ್ಳಲು ಸಹಾಯ ಮಾಡುವಂತೆ ಕೇಳುತ್ತೇವೆ, ಊರಿನ ಶಾಲೆ ಶಿಥಿಲವಾಗಿದೆ ಅದನ್ನು ಗಟ್ಟಿಗೊಳಿಸುವಂತೆ ಕೇಳುತ್ತೇವೆ ಎಂದರು.
ಸಿಂಪಲ್ ಸಸ್ಯಾಹಾರಿ ಊಟ
ಹೊಸ ವರ್ಷದ ಸಿಹಿಯಾಗಿ ಕಡಲೆಬೇಳೆ-ಶಾಬಕ್ಕಿ ಪಾಯಸವನ್ನು ಮಾಡಿ ಸಚಿವರಿಗೆ ಬಡಿಸಲು ಯೋಚಿಸಿದ್ದೇವೆ. ಬೇರೆ ಏನೂ ಮಾಡುವಂತೆ ನಮಗೆ ತಿಳಿಸಿಲ್ಲ. ಸದ್ಯಕ್ಕೆ ಮನೆಯವರಿಗೆ, ಸಚಿವರಿಗೆ ಮಾತ್ರ ಅಡುಗೆ ತಯಾರಿಸುವವರಿದ್ದೇವೆ. ಬೇರೆ ಯಾರಿಗಾದರೂ ಮಾಡಬೇಕಾ ಎಂಬುದನ್ನು ಇಲಾಖೆಯ ಅಧಿಕಾರಿಗಳ ಬಳಿ ಕೇಳಿ ತಿಳಿಯಬೇಕಷ್ಟೇ ಎಂದು ಸುಶೀಲಾ ಹೇಳಿದರು.
ಖುಷಿಯಾಗಿದೆ
ರಾಜ್ಯದ ಸಚಿವರೊಬ್ಬರು ನಮ್ಮ ಮನೆಗೆ ಆಗಮಿಸಲಿದ್ದಾರೆ. ಇಲ್ಲೇ ವಾಸ್ತವ್ಯ ಮಾಡಲಿದ್ದಾರೆ ಎಂಬುದು ಖುಷಿಯ ವಿಷಯ. ಯಾಕೆಂದರೆ ನಮ್ಮ ಊರಿಗೆ ಯಾರೂ ಇದುವರೆಗೆ ಬಂದಿಲ್ಲ. ಮೊದಲ ಬಾರಿಗೆ ದೊಡ್ಡವರೊಬ್ಬರು ಬರುತಿದ್ದಾರೆ. ಅವರಿಗೆ ನಮಗೆ ಏನು ಮಾಡಲು ಸಾಧ್ಯವೊ ಅದನ್ನು ಮಾಡಿ ಹಾಕುತ್ತೇವೆ. ನಮ್ಮ ಮನೆಯ ಕೋಣೆಯಲ್ಲಿ ಅವರಿಗೆ ಮಲಗಲು ವ್ಯವಸ್ಥೆ ಮಾಡುತ್ತೇವೆ. (ಆ ಕೋಣೆಗೆ ಬಾಗಿಲಿಲ್ಲ).
-ಮರ್ಲಿ ಕೊರಗ (ಮನೆಯ ಯಜಮಾನಿ)
ಸಚಿವರಿಗಾಗಿ ಹೊಸ ಶೌಚಾಲಯ
ಒಂದು ರಾತ್ರಿ ತಂಗಲು ಮೂರೂರಿಗೆ ಬರುವ ಸಚಿವರ ಬಳಕೆಗಾಗಿ ಇಲಾಖೆ ಹಾಗೂ ಗ್ರಾಪಂ ಸೇರಿ ಅಂದಾಜು 45ರಿಂದ 50,000ರೂ. ವೆಚ್ಚದಲ್ಲಿ ಹೊಸ ಶೌಚಾಲಯವೊಂದನ್ನು ನಿರ್ಮಿಸಿದೆ. ಇದರಲ್ಲಿ ಆಧುನಿಕ ಕಮೋಡ್, ಕೈತೊಳೆಯಲು ಬೇಸಿನ್‌ನ್ನು ನಿರ್ಮಿಸಲಾಗಿದೆ. ಸಚಿವರಿಗೆ ಇಲ್ಲೇ ಸ್ನಾನಕ್ಕೂ ವ್ಯವಸ್ಥೆ ಇರುತ್ತದೆ. ಹೀಗಾಗಿ ಮನೆಯ ಶೌಚಾಲಯವನ್ನು ಸಚಿವರು ಬಳಸುವುದಿಲ್ಲ. ಸಚಿವರ ಭೇಟಿಯ ದ್ಯೋತಕವಾಗಿ ಈ ಶೌಚಾಲಯ ಉಳಿದುಕೊಳ್ಳುತ್ತದೆ.