ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಅಝರ್ ಸೇರ್ಪಡೆಗೆ ಚೀನಾ ತಡೆ :ಭಾರತದಿಂದ ಕಳವಳ

Update: 2016-12-30 16:19 GMT

ಬೀಜಿಂಗ್, ಡಿ. 30: ಪಾಕಿಸ್ತಾನದಲ್ಲಿ ನೆಲೆಸಿರುವ ಭಯೋತ್ಪಾದಕ ಮಸೂದ್ ಅಝರ್‌ನನ್ನು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಭಾರತದ ಪ್ರಯತ್ನಗಳಿಗೆ ಚೀನಾ ಮತ್ತೊಮ್ಮೆ ಅಡ್ಡಗಾಲು ಹಾಕಿದೆ.

ಚೀನಾದ ಈ ನಿಲುವಿಗೆ ಭಾರತ ಕಳವಳ ವ್ಯಕ್ತಪಡಿಸಿದ್ದು, ಈ ವಿಷಯದ ಪ್ರಾಮುಖ್ಯತೆಯನ್ನು ಬೀಜಿಂಗ್ ಅರ್ಥ ಮಾಡಿಕೊಳ್ಳುತ್ತದೆ ಎನ್ನುವುದು ತನ್ನ ನಿರೀಕ್ಷೆಯಾಗಿತ್ತು ಎಂದು ಹೇಳಿದೆ.

‘‘ಸ್ವತಃ ಚೀನಾವೇ ಭಯೋತ್ಪಾದನೆಯ ಪಿಡುಗಿಗೆ ಬಲಿಯಾಗಿರುವಾಗ, ಮಸೂದ್ ಅಝರ್‌ನನ್ನು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಭಾರತದ ಪ್ರಸ್ತಾಪವನ್ನು ತಡೆಹಿಡಿಯುವ ಚೀನಾದ ನಿರ್ಧಾರ ಆಶ್ಚರ್ಯಕರವಾಗಿದೆ’’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ.

‘‘ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ದ್ವಿಮುಖ ಧೋರಣೆಗಳಿರುವುದು ಚೀನಾದ ಕೃತ್ಯದಿಂದ ಸಾಬೀತಾಗಿದೆ’’ ಎಂದರು.
ಹಿಂಸೆಯಲ್ಲಿ ತೊಡಗಿರುವವರನ್ನು ಕಾನೂನಿನ ಕಟಕಟೆಗೆ ತರುವ ತನ್ನ ಪ್ರಯತ್ನಗಳನ್ನು ಭಾರತ ಮುಂದುವರಿಸುವುದು ಎನ್ನುವುದನ್ನು ಅವರು ಸ್ಪಷ್ಟಪಡಿಸಿದರು.
‘‘ಪರಮಾಣು ಪೂರೈಕೆದಾರರ ಗುಂಪಿಗೆ ಸೇರ್ಪಡೆಗೊಳ್ಳಲು ಭಾರತ ಹಾಕಿರುವ ಅರ್ಜಿ ಮತ್ತು ಮಸೂದ್‌ನನ್ನು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಭಾರತದ ಪ್ರಸ್ತಾಪಗಳಿಗೆ ಸಂಬಂಧಿಸಿದ ಚೀನಾದ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ’’ ಎಂಬುದಾಗಿ ಕಳೆದ ವಾರ ಚೀನಾದ ವಿದೇಶ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಹೇಳಿದ್ದರು.

ಅಝರ್‌ನನ್ನು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಭಾರತದ ಪ್ರಸ್ತಾಪಕ್ಕೆ ತಾನು ಹೇರಿದ್ದ ‘ತಾಂತ್ರಿಕ ತಡೆ’ಯನ್ನು ಚೀನಾ ಅಕ್ಟೋಬರ್‌ನಲ್ಲಿ ವಿಸ್ತರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News