×
Ad

ಜಾರ್ಖಂಡ್: ಗಣಿ ದುರಂತಕ್ಕೆ 10 ಜನರು ಬಲಿ, ಹಲವಾರು ಜನರು ಇನ್ನೂ ನಾಪತ್ತೆ

Update: 2016-12-30 22:20 IST

ರಾಂಚಿ,ಡಿ.30: ಗುರುವಾರ ತಡರಾತ್ರಿ ಭೀಕರ ಭೂಕುಸಿತಕ್ಕೆ ತುತ್ತಾದ ಲಾಲ್‌ಮಾಟಿಯಾ ಕಲ್ಲಿದ್ದಲು ಗಣಿಯ ಅವಶೇಷಗಳಿಂದ ಇನ್ನೂ ಎರಡು ಶವಗಳನ್ನು ಇಂದು ಹೊರಕ್ಕೆ ತೆಗೆಯಲಾಗಿದೆ. ಇದರೊಂದಿಗೆ ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 10ಕ್ಕೇರಿದೆ. ಇನ್ನೂ ಹಲವಾರು ಜನರು ಅವಶೇಷಗಳಡಿ ಸಿಕ್ಕಿ ಹಾಕಿಕೊಂಡಿರುವ ಭೀತಿ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ನಡೆಯುತ್ತಿದೆ.

ಭೂಕುಸಿತದಿಂದ 23 ಗಣಿಕಾರ್ಮಿಕರು ಮತ್ತು ಡಝನ್‌ಗಟ್ಟಲೆ ವಾಹನಗಳು ಹೂತು ಹೋಗಿದ್ದು, ನತದೃಷ್ಟರ ರಕ್ಷಣೆಗಾಗಿ ನೂರಾರು ಜನರು ರಾತ್ರಿಯಿಡೀ ಶ್ರಮಿಸಿದ್ದರು.

ಈವರೆಗೆ 10 ಶವಗಳನ್ನು ಹೊರಕ್ಕೆ ತೆಗೆಯಲಾಗಿದೆ. ಒಳಗಡೆ ಇನ್ನೂ 2-3 ಶವಗಳು ಇದ್ದಿರಬಹುದೆಂದು ಗಣಿ ಅಧಿಕಾರಿಗಳು ಶಂಕಿಸಿದ್ದಾರೆ. ನಮ್ಮ ಅಂದಾಜಿನಂತೆ ಒಟ್ಟು ಮೃತರ ಸಂಖ್ಯೆ 13-14ನ್ನು ಮೀರದು ಎಂದು ಜಾರ್ಖಂಡ್ ಪೊಲೀಸ್ ವಕ್ತಾರ ಆರ್.ಕೆ.ಮಲಿಕ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಭೂಕುಸಿತದ ಬಳಿಕ ಕೆಲವು ಕಾರ್ಮಿಕರು ಜೀವಸಹಿತ ಪಾರಾಗಿ ಮೇಲಕ್ಕೆ ಬಂದಿದ್ದಾರೆ ಎಂದರು.

ದುರಂತಕ್ಕೆ ಟ್ವಿಟರ್‌ನಲ್ಲಿ ದುಃಖವನ್ನು ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು,ರಕ್ಷಣಾ ಕಾರ್ಯಾಚರಣೆಗಳಲ್ಲಿ ರಾಜ್ಯಕ್ಕೆ ಎಲ್ಲ ನೆರವಿನ ಭರವಸೆ ನೀಡಿದ್ದಾರೆ.

ಗುರುವಾರ ರಾತ್ರಿ 7:30ರ ಸುಮಾರಿಗೆ ಕಾರ್ಮಿಕರು ನಿರ್ಗಮನ ದ್ವಾರದತ್ತ ತೆರಳುತ್ತಿದ್ದಾಗ 250 ಮೀ.(820 ಅಡಿ)ಗೂ ಹೆಚ್ಚಿನ ಗಣಿಯ ಭಾಗ ಕುಸಿದು ಬಿದ್ದಿತ್ತು ಎಂದು ಗಣಿಯನ್ನು ನಿರ್ವಹಿಸುತ್ತಿರುವ ಸರಕಾರಿ ಸ್ವಾಮ್ಯದ ಈಸ್ಟರ್ನ್ ಕೋಲ್‌ಫೀಲ್ಡ್ಸ್‌ನ ಹಿರಿಯ ಅಧಿಕಾರಿ ನಿಲಾದ್ರಿ ರಾಯ್ ಸುದ್ದಿಗಾರರಿಗೆ ತಿಳಿಸಿದರು.

ಗುರುವಾರವೇ ಜಾರ್ಖಂಡ್‌ನ ಧನಬಾದ್ ಜಿಲ್ಲೆಯಲ್ಲಿನ ಸರಕಾರಿ ಸ್ವಾಮ್ಯದ ಪುತ್ಕಿ ಬಲಿಹಾರಿ ಕಲ್ಲಿದ್ದಲು ಗಣಿಯ ಛಾವಣಿಯು ಭಾಗಶಃ ಕುಸಿದು ಬಿದ್ದು ಸಂಭವಿಸಿದ ಪ್ರತ್ಯೇಕ ಅವಘಡದಲ್ಲಿ ನಾಲ್ವರು ಕಾರ್ಮಿಕರು ಗಾಯಗೊಂಡಿದ್ದು, ಈ ಪೈಕಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News