ಪಣಂಬೂರು ಕಡಲ ಕಿನಾರೆಯಲ್ಲಿ ಬೀಚ್ ಉತ್ಸವಕ್ಕೆ ಚಾಲನೆ
ಮಂಗಳೂರು, ಡಿ.30:ಪಣಂಬೂರು ಕಡಲ ತೀರದಲ್ಲಿ ಕರಾವಳಿ ಉತ್ಸವದ ಅಂಗವಾಗಿ ಹಮ್ಮಿಕೊಂಡ ಮೂರು ದಿನಗಳ ಬೀಚ್ ಉತ್ಸವವನ್ನು ಮಂಗಳೂರು ಸಹಾಯಕ ಕಮೀಶನರ್ ರೇಣುಕಾ ಪ್ರಸಾದ್ ಗಾಳಿ ಪಟ ಹಾರಿಸುವ ಮೂಲಕ ಉದ್ಘಾಟಿಸಿದರು.
ಇತ್ತೀಚಿನ ದಿನಗಳಲ್ಲಿ ಪಣಂಬೂರು ಬೀಚ್‌ಗೆ ಪ್ರವಾಸಿಗರು ಹೆಚ್ಚಿಗೆ ಆಗಮಿಸುತ್ತಿದ್ದು , ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕರಾವಳಿ ಉತ್ಸವವೂ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅದರ ಅಂಗವಾಗಿ ಡಿ.30,31ಮತ್ತು ಜ. 1ರವರೆಗೆ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳೊಂದಿಗೆ ಬೀಚ್ ಉತ್ಸವ ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ನಿರ್ಮಿಸಲಾದ ವೇದಿಕೆಯಲ್ಲಿ ಸ್ಥಳೀಯ ಕಲಾವಿದರ ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಬೀಚ್ ವಾಲಿಬಾಲ್,ನೃತ್ಯ ವೈವಿಧ್ಯ,ಸ್ಕೇಟಿಂಗ್,ಬೀಚ್ ತ್ರೋಬಾಲ್ ,ಯೋಗ,ಉದಯ ರಾಗ,ಬೊಟ್ ರೇಸ್ ಮೊದಲಾದ ಕಾರ್ಯಕ್ರ ಮಗಳೊಂದಿಗೆ ಆಹಾರೋತ್ಸವ,ಗಾಳಿಪಟ ಉತ್ಸವ,ಮನೋರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರೇಣುಕಾಪ್ರಸಾದ್ ತಿಳಿಸಿದರು.
ಈ ಬಾರಿಯ ಕರಾವಳಿ ಉತ್ಸವದ ಸಂದರ್ಭದಲ್ಲಿ ಹೊಸ ವರ್ಷದ ಕಾರ್ಯಕ್ರಮಗಳು ಇರುವುದರಿಂದ ಬೆಳಗ್ಗೆ 5ರಿಂದ ರಾತ್ರಿ 9ರವರೆಗೆ ಮಾತ್ರ ವಿವಿಧ ಕಾರ್ಯಕ್ರಮಗಳು ನಡೆಯಲಿದೆ.
ಶನಿವಾರ,ಭಾನುವಾರ ಗಾಳಿಪಟ ಉತ್ಸವ ಬೀಚ್‌ನಲ್ಲಿ ನಡೆಯಲಿದೆ.ಶನಿವಾರ ಬೆಳಗ್ಗೆ ನಂದನೇಶ್ವರ ದೇವಸ್ಥಾನದ ವಠಾದಲ್ಲಿ 7ಗಂಟೆಗೆ ಸ್ಕೇೀಟಿಂಗ್ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಬೀಚ್ ಉತ್ಸವ ಸಮಿತಿಯ ಸಂಘಟಕರಾದ ಯತೀಶ್ ಬೈಕಂಪಾಡಿ ತಿಳಿಸಿದ್ದಾರೆ.ಸಮಾರಂಭದಲ್ಲಿ ಬೀಚ್ ಉತ್ಸವ ಸಮಿತಿಯ ಸಂಘಟಕರಾದ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಮಹೇಶ್ ಕುಮಾರ್,ಮಾಜಿ ಉಪನಿರ್ದೇಶಕ ಸುರೇಶ್ ಕುಮಾರ್,ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಮೊದಲಾದವರು ಉಪಸ್ಥಿತರಿದ್ದರು.
ಪಣಂಬೂರಿನಲ್ಲಿ ಸರ್ಫಿಂಗ್ ಕ್ಲಬ್:
ಪಣಂಬೂರು ಬೀಚ್‌ನಲ್ಲಿಯೂ ಈ ಬಾರಿ ಪ್ರಥಮ ಬಾರಿಗೆ ಸರ್ಫಿಂಗ್ ಕ್ಲಬ್ ಒಂದನ್ನು ಆರಂಭಿಸಲು ತೀರ್ಮಾನಿಸಲಾಗಿದೆ.ಈ ಬಾರಿಯ ಬೀಚ್ ಉತ್ಸವದ ಸಂದರ್ಭದಲ್ಲಿ ಈ ಸರ್ಫಿಂಗ್ ಕ್ಲಬ್‌ನ್ನು ಆರಂಭಿಸಲಾಗುವುದು ಎಂದು ಪಣಂಬೂರು ಬೀಚ್ ಅಭಿವೃದ್ಧಿ ಸಮಿತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಯತೀಶ್ ಬೈಕಂಪಾಡಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪಣಂಬೂರು ಬೀಚ್ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ.ಮಂಗಳೂರು ಭೇಟಿಗಾಗಿ ನವೆಂಬರ್ -ಡಿಸೆಂಬರ್ ತಿಂಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.ಆದರೆ ಅವರಿಗೆ ಇಲ್ಲಿ ಉಳಿದುಕೊಳ್ಳಲು ಸೂಕ್ತ ವಸತಿ ಸಮಸ್ಯೆ ಇದೆ.ಪಣಂಬೂರು ಬಿಚ್‌ನಲ್ಲಿಯೂ ಕಾಟೇಜ್ ಸಂಖ್ಯೆ ಬಹಳ ಕಡಿಮೆ ಇದೆ ನಗರದಲ್ಲೂ ಹೆಚ್ಚಿನ ವಸತಿ ಗೃಹಗಳು ತುಂಬಿರುತ್ತವೆ. ಜಿಲ್ಲೆಯಲ್ಲಿ ಹೋಂ ಸ್ಟೇಯ ಪರಿಕಲ್ಪನೆಯೂ ಹೆಚ್ಚು ಪ್ರಚಾರಕ್ಕೆ ಬಂದಿಲ್ಲ.ನಗರಕ್ಕೆ ಬರುವ ಪ್ರವಾಸಿಗರಿಗೆ ಇಲ್ಲಿ ತಂಗಲು ವಸತಿ ವ್ಯವಸ್ಥೆಯ ಬೇಡಿಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ.
ಪಣಂಬೂರು ಬೀಚ್ ಪ್ರವಾಸಿಗರಿಗೆ ಸುರಕ್ಷಿತವಾದ ಬೀಚ್.ಇಲ್ಲಿ ಬರುವ ಪ್ರವಾಸಿಗರಿಗೆ ದೋಣಿ ವಿಹಾರದ ಸಂದರ್ಭದಲ್ಲಿ ಸಾಕಷ್ಟು ಸುರಕ್ಷತೆಯ ಕ್ರಮಗಳನ್ನು ಕೈ ಗೊಂಡಿದ್ದೇವೆ.ಪ್ರವಾಸಿಗರು ಚಿಕ್ಕ ಮಕ್ಕಳನ್ನು ನೀರಿನ ಬಳಿ ಕರೆತರುವಾಗ ಎಚ್ಚರ ವಹಿಸಬೇಕು ಎಂದು ಯತೀಶ್ ಬೈಕಂಪಾಡಿ ತಿಳಿಸಿದರು.