×
Ad

ಬಂಟ್ವಾಳ ಪೇಟೆಗೆ ಫುಟ್‌ಪಾತ್ ಬರಬಹುದೇ ?

Update: 2016-12-30 23:24 IST

ಬಂಟ್ವಾಳ, ಡಿ. 30: ಜನಸಾಮಾನ್ಯರಿಗೆ ನಿರಾಳವಾಗಿ ಸಂಚರಿಸಲು ಫುಟ್‌ಪಾತ್ ಇಲ್ಲದ ಏಕೈಕ ನಗರವಾಗಿರುವ ಬಂಟ್ವಾಳ ಪೇಟೆ ಅಗಲೀಕರಣಗೊಳ್ಳಬೇಕೆಂಬುದು ನಗರ ವಾಸಿಗಳ ಬಹುಕಾಲದ ಬೇಡಿಕೆ. ಭರತ್‌ಲಾಲ್ ಮೀನ ಜಿಲ್ಲಾದಿಕಾರಿಯಾಗಿರುವಾಗ ಬಂಟ್ವಾಳ ನಗರವನ್ನು ಅಗಲೀಕರಣಗೊಳಿಸಿ ಜನಸಾಮಾನ್ಯರು ನಿಶ್ಚಿಂತತೆಯಿಂದ ಓಡಾಡುವ ನಿಟ್ಟಿನಲ್ಲಿ ಪುಟ್‌ಪಾತ್ ನಿರ್ಮಿಸಲು ಮುನ್ನುಡಿ ಹಾಕಿ ರಸ್ತೆಯನ್ನು ಅತಿಕ್ರಮಿಸಿರುವ ಅಂಗಡಿಗಳನ್ನು ತೆರವುಗೊಳಿಸಲು ಗುರುತು ಕೂಡಾ ಹಾಕಿದ್ದರು.

ಈ ಬೆಳವಣಿಗೆಯ ಬೆನ್ನಲ್ಲೇ ಕಾಕತಾಳೀಯ ಎಂಬಂತೆ ಮೀನರವರು ವರ್ಗಾವಣೆಗೊಂಡರು. ತದನಂತರ ಬಂಟ್ವಾಳ ಪೇಟೆ ಅಗಲೀಕರಣ ಪ್ರಸ್ತಾಪ ನೆನೆಗುದಿಗೆ ಬಿದ್ದಿತು. ಪೊನ್ನುರಾಜ್‌ರವರು ಜಲ್ಲಾಧಿಕಾರಿಯಾಗಿ ಬಂದ ಬಳಿಕ ಮತ್ತೆ ಇದಕ್ಕೆ ಚಾಲನೆ ಸಿಕ್ಕಿತು. ಆ ಸಂದರ್ಭದಲ್ಲಿ ಬಂಟ್ವಾಳ ಅಗಲೀಕರಣಗೊಳ್ಳಬಹುದೆಂಬುದು ಇಲ್ಲಿಯ ನಗರವಾಸಿಗಳಲ್ಲಿ ಆಶೆ ಹುಟ್ಟಿತು. ಆದರೆ ಕೊನೆಗೆ ಅದು ಕೂಡಾ ಠುಸ್ಸಾಯಿತು.

ಮತ್ತೆ ಚಿಗುರಿತು :

ಖಡಕ್, ದಕ್ಷ ಅಧಿಕಾರಿ ಎಂದೇ ಬಿಂಬಿತವಾದ ಜಿಲ್ಲಾಧಿಕಾರಿ ಡಾ. ಜಗದೀಶ್‌ರವರು ಕಳೆದ ನವೆಂಬರ್ ತಿಂಗಳಲ್ಲಿ ಬಂಟ್ವಾಳ ಪೇಟೆ ಅಗಲೀಕರಣ ಸಂಬಂಧಿಸಿದಂತೆ ಎರಡು ಸರಣಿ ಸಭೆ ನಡೆಸಿದ್ದರು. ತಕ್ಷಣ ಕಾಂರ್ಪ್ರವೃತ್ತರಾದ ಬಂಟ್ವಾಳ ಲೋಕೋಪಯೋಗಿ ಹಾಗೂ ಸರ್ವೆ ಇಲಾಖೆ ಸರಕಾರಿ ಸ್ಥಳವನ್ನು ಅತಿಕ್ರಮಣಗೊಳಿಸಿರುವ ಅಂಗಡಿಗಳನ್ನು ಸರ್ವೆ ನಡೆಸಿ ಗುರುತು ಮಾಡಿತ್ತು.

ಇದಾದ ಕೆಲವೇ ದಿನಗಳಲ್ಲಿ ಲೋಕೋಪಯೋಗಿ ಇಲಾಖೆ 15 ದಿನದೊಳಗಾಗಿ ಸರಕಾರಿ ಸ್ಥಳವನ್ನು ಅತಿಕ್ರಮಣಗೊಳಿಸಿರುವ ಅಂಗಡಿ ಮಾಲೀಕರು ಸ್ವಯಂ ಪ್ರೇರಿತವಾಗಿ 15 ದಿನದೊಳಗಾಗಿ ತೆರವುಗೊಳಿಸುವಂತೆ ಗಡುವು ನೀಡಿ ಪ್ರಕಟಣೆ ಹೊರಡಿಸಿತ್ತು. 15 ಕಳೆದರೂ ಲೋಕೋಪಯೋಗಿ ಇಲಾಖೆ ಮಾತ್ರ ತೆರವು ಕಾರ್ಯಾಚರಣೆಗೆ ಮುಂದಾಗಿರಲಿಲ್ಲ.

ಇದಾದ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿಯವರ ಕಚೇರಿಯಲ್ಲೇ ಕಳೆದ ವಾರ ಅಧಿಕಾರಿಗಳ ಸಭೆಯೊಂದು ನಡೆದಿದ್ದು ಇದರಲ್ಲಿ ಬಂಟ್ವಾಳ ಪೇಟೆಯ ಅಗಲೀಕರಣಕ್ಕೆ ಮುನ್ನ ಇಲ್ಲಿನ ವರ್ತಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರೊಂದಿಗೆ ಚರ್ಚಿಸಿ ಮುಂದುವರಿಯುವಂತೆ ಸಚಿವರು ಅಧಿಕಾರಿಗಳಿಗೆ ತಾಕೀತು ಮಾಡಿದ್ದರು.

ಐಬಿಯಲ್ಲಿ ರಹಸ್ಯ ಸಭೆ :

ಸಚಿವರ ಸೂಚನೆಯ ಮೇರೆಗೆ ಮಂಗಳೂರು ಸಹಾಯಕ ಆಯುಕ್ತ, ರೇಣುಕಾಪ್ರಸಾದ್‌ರವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ಬಂಟ್ವಾಳದ ಬೆರಳೆಣಿಕೆಯ ವರ್ತಕರನ್ನು ಸೇರಿಸಿ ರಹಸ್ಯ ಸಭೆಯೊಂದು ನಡೆದಿದೆ. ಈ ಸಭೆಗೆ ಪುರಸಭೆಯ ಸ್ಥಳೀಯ ಸದಸ್ಯರನ್ನು ಕರೆಯದೆ ಕಡೆಗಣಿಸಲಾಗಿತ್ತು. ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಮಂಗಳೂರು ಯೋಜನಾ ನಿರ್ದೇಶಕ ಪ್ರಸನ್ನ, ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಮುಖ್ಯಾಧಿಕಾರಿ ಸುಧಾಕರ್, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಅರುಣ್ ಪ್ರಕಾಶ್, ಸರ್ವೇ ಇಲಾಖೆಯ ಸೂಪರ್‌ವೈಸರ್ ಅಹ್ಮದ್, ಕಂದಾಯ ಇಲಾಖೆಯ ಗ್ರಾಮ ಕರಣಿಕರಾದ ಜನಾರ್ದನ್, ಯೋಗಾನಂದ, ತೌಫಿಕ್ ಅವರು ಉಪಸ್ಥಿತರಿದ್ದರು.

ಜನವರಿ 17ಕ್ಕೆ ಮತ್ತೆ ಸಭೆ :

ಈ ಸಭೆಯಲ್ಲಿ ಹಾಜರಿದ್ದ ವರ್ತಕರ ಸಂಘದ ಕೆಲವು ಪ್ರಮುಖರು ತಾವು ಎಲ್ಲ ವರ್ತಕರನ್ನು ಸೇರಿಸಿ ಸಭೆ ನಡೆಸುವ ಮೂಲಕ ಒಂದು ತೀರ್ಮಾನಕ್ಕೆ ಬಂದು ಬಳಿಕ ಮುಂದಿನ ಸಭೆಯಲ್ಲಿ ನಿರ್ಧಾರವನ್ನು ತಿಳಿಸುವುದಾಗಿ ಹೇಳಿದ್ದಾರೆಂದು ಸಭೆಯ ಬಳಿಕ ಸಹಾಯಕ ಆಯುಕ್ತ ರೇಣುಕಾ ಪ್ರಸಾದ್‌ರವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಜನವರಿ 17ರಂದು ಮತ್ತೆ ಸಭೆಯನ್ನು ನಡೆಸಲು ನಿರ್ಧರಿಸಲಾಗಿದ್ದು ಅಂದು ವರ್ತಕರು ತಮ್ಮ ಅಭಿಪ್ರಾಯವನ್ನು ಮಂಡಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News