×
Ad

ರಸ್ತೆ ದುರಸ್ತಿಗೊಳಿಸುವಂತೆ ವಿದ್ಯಾರ್ಥಿನಿ ಪತ್ರಕ್ಕೆ ಸ್ಪಂದಿಸಿದ ಪ್ರಧಾನಿ ಸಚಿವಾಲಯ

Update: 2016-12-30 23:31 IST

ಪುತ್ತೂರು, ಡಿ.30 : ನಮ್ಮ ಊರಿನ ರಸ್ತೆಯು ತೀರಾ ಹದೆಗೆಟ್ಟಿದ್ದು, ಈ ರಸ್ತೆಯನ್ನು ದುರಸ್ತಿಗೊಳಿಸುವಂತೆ 8ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಪ್ರಧಾನಿಗೆ ಪತ್ರ ಬರೆದಿದ್ದು, ಈ ಪತ್ರಕ್ಕೆ ಸ್ಪಂಧನೆ ನೀಡಿದ ಪ್ರಧಾನಿ ಸಚಿವಾಲಯ ರಾಜ್ಯ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ದೂರನ್ನು ತುರ್ತಾಗಿ ಪರಿಶೀಲಿಸಿ ಕ್ರಮ ಕೈಗೊಂಡು ವರದಿ ನೀಡುವಂತೆ ಆದೇಶಿಸಿದೆ. 

ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ನಿವಾಸಿ ಆರ್.ಬಿ. ಸುವರ್ಣ ಅವರ ಪುತ್ರಿ ನಗರದ ಸೈಂಟ್ ವಿಕ್ಟರ್ಸ್‌ ಹೆಣ್ಮಕ್ಕಳ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ ಶ್ರಾವ್ಯ ಪ್ರಧಾನಿಗೆ ಪತ್ರ ಬರೆದ ವಿದ್ಯಾರ್ಥಿನಿ.

‘ನಮ್ಮ ಊರಿನ ರಸ್ತೆ ತೀರಾಹದಗೆಟ್ಟಿದೆ, ಕಳೆದ ಕೆಲವು ವರ್ಷಗಳಿಂದ ಇದೇ ದುಸ್ಥಿತಿಯಲ್ಲಿದೆ, ರಸ್ತೆ ದುರಸ್ಥಿ ಮಾಡಿ ಎಂದು ನಾವೆಲ್ಲರೂ ಸೇರಿ ಪ್ರತಿಭಟನೆಯನ್ನು ಮಾಡಿದ್ದೆವು.  ಆದರೆ ಅನುದಾನ ನೀಡುವುದಾಗಿ ಅಕಾರಿಗಳು ಭರವಸೆ ನೀಡುತ್ತಾರೆಯೇ ವಿನಃ ರಸ್ತೆಯನ್ನು ದುರಸ್ಥಿ ಮಾಡುತ್ತಿಲ್ಲ. ಹೊಂಡಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ನಮಗೆ ಓಡಾಡಲು ಕಷ್ಟವಾಗುತ್ತಿದೆ. ಬಸ್ಸು ನಿಧಾನಕ್ಕೆ ಚಲಿಸುವ ಕಾರಣ ಅಥವಾ ರಸ್ತೆಯ ದುಸ್ಥಿತಿಯ ಕಾರಣಕ್ಕೆ ಬಸ್ಸುಗಳು ಬಾರದೇ ಇರುವುದರಿಂದ ನಮಗೆ ತೀವ್ರ ತೊಂದರೆಯಾಗಿದೆ.  ದಯವಿಟ್ಟು ನಮ್ಮ ದೇವಸ್ಯ- ಚೆಲ್ಯಡ್ಕ ರಸ್ತೆಯನ್ನು ದುರಸ್ಥಿ ಮಾಡಿಸಿ ’ ಹೀಗೆಂದು ಶ್ರಾವ್ಯ ಪ್ರಧಾನಿಗೆ ಪತ್ರ ಬರೆದಿದ್ದರು.

ಇದಕ್ಕೆ ಸ್ಪಂದಿಸಿದ ಪ್ರಧಾನಿ ಸಚಿವಾಲಯದಿಂದ ರಾಜ್ಯ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆಯಲಾಗಿದ್ದು,  ವಿದ್ಯಾರ್ಥಿನಿ ದೂರನ್ನು ತುರ್ತಾಗಿ ಪರಿಶೀಲಿಸಿ ಕ್ರಮಕೈಗೊಂಡು ವರದಿ ನೀಡುವಂತೆ ಪತ್ರದಲ್ಲಿ ತಿಳಿಸಲಾಗಿದೆ.

ಪುತ್ತೂರು ನಗರದಿಂದ ಪಾಣಾಜೆ ಮೂಲಕ ಕೇರಳಕ್ಕೆ ಸಂಪರ್ಕವಿರುವ ಜಿಲ್ಲಾ ಪಂಚಾಯತ್ ರಸ್ತೆಯು ಪುತ್ತೂರಿನಿಂದ ಸುಮಾರು 5 ಕಿ.ಮೀ ದೂರದ ದೇವಸ್ಯದಿಂದ ಚೆಲ್ಯಡ್ಕ ಎಂಬಲ್ಲಿನತನಕ ಸುಮಾರು 4 ಕಿ.ಮೀ ತೀರಾ ಹದೆಗೆಟ್ಟಿದ್ದು, ಈ ರಸ್ತೆ ಬಳ್ಳೇರಿ ರಕ್ಷಿತಾರಣ್ಯ ಪ್ರದೇಶದಲ್ಲಿ ಸಾಗುವ ಕಾರಣ ಮಳೆ ನೀರಿಗೆ ರಸ್ತೆ ಕೆಟ್ಟು ಹೋಗಿದೆ. ಅಲ್ಲದೆ ಸೂಕ್ತ ಚರಂಡಿ ಇಲ್ಲದ ಕಾರಣ ಮಳೆಯ ನೀರು ರಸ್ತೆಯಲ್ಲೇ ಹರಿಯುವ ಕಾರಣ ರಸ್ತೆಯಲ್ಲಿನ ಡಾಮರನ್ನು ಕೊಚ್ಚಿಕೊಂಡು ಹೋಗಿದೆ.

ಈ ರಸ್ತೆ ಸಂಪೂರ್ಣ ಹೊಂಡಮಯವಾಗಿದ್ದು ವಾಹನಗಳ ಸಂಚಾರಕ್ಕೆ ಅಯೋಗ್ಯವಾಗಿದೆ. ರಸ್ತೆ ಹದಗೆಟ್ಟಿರುವ ಕಾರಣ ರಸ್ತೆಯಲ್ಲಿ ಖಾಸಗಿ ಬಸ್ಸುಗಳು ಮಾತ್ರ ಓಡಾಡುತ್ತಿದ್ದು ಉಳಿದ ವಾಹನಗಳ ಓಡಾಟವೂ ಕಡಿಮೆಯಾಗಿದ್ದು ಸರಕಾರಿ ಬಸ್ಸುಗಳು ಈ ರಸ್ತೆಯಲ್ಲಿ ಸಂಚಾರವಿಲ್ಲ. ರಸ್ತೆಯನ್ನು ದುರಸ್ಥಿ ಮಡಿ ಎಂದು ಗ್ರಾಮಸ್ಥರು ಕಳೆದ ವರ್ಷ ಪ್ರತಿಭಟನೆಯನ್ನು ಮಾಡಿದ್ದರು.

ಇದೀಗ ವಿದ್ಯಾರ್ಥಿನಿ ಶ್ರಾವ್ಯ ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ರಸ್ತೆ ದುರಸ್ತಿಗೆ ಆಗ್ರಹಿಸಿದ್ದಾರೆ. ತನ್ನ ಪತ್ರಕ್ಕೆ ಪ್ರಧಾನಿ ಸ್ಪಂದನೆ ನೀಡಿರುವ ಕುರಿತು ವಿದ್ಯಾರ್ಥಿನಿ ಶ್ರಾವ್ಯ ಸಂತಸಗೊಂಡಿದ್ದು , ಇನ್ನಾದರೂ ನಮ್ಮೂರಿನ ರಸ್ತೆ ಅಭಿವೃದ್ದಿಯಾಗಬಹುದು ಎಂಬ ಖುಷಿಯಲ್ಲಿದ್ದಾರೆ.

ಜಿಪಂ ಇಲಾಖೆಯ ಇಂಜನಿಯರ್‌ಗಳು ಬಂದು ರಸ್ತೆಯನ್ನು ಪರಿಶೀಲಿಸಿ ತೆರಳಿದ್ದಾರೆ ಎಂದು ಸ್ಥಳೀಯ ಗ್ರಾಮಸಸ್ಥರು ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News