ಸೆಪ್ಟಂಬರ್ ತಿಂಗಳೊಳಗೆ 65 ಜನಸಂಪರ್ಕ ಸಭೆ: ಸಚಿವ ಪ್ರಮೋದ್
ಉಡುಪಿ, ಡಿ.30: ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 35ವಾರ್ಡ್ ಹಾಗೂ 30ಗ್ರಾಮಗಳ ಜನಸಂಪರ್ಕ ಸಭೆಯನ್ನು ಮುಂದಿನ ಸೆಪ್ಟೆಂಬರ್ ತಿಂಗಳೊಳಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಮೂರು ಜನಸಂಪರ್ಕ ಸಭೆಯನ್ನು ನಡೆಸಲಾಗಿದ್ದು, ಮುಂದೆ ವಾರಕ್ಕೆ ಎರಡರಂತೆ ಸಭೆ ನಡೆಸಿ ಜನರ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಉಡುಪಿ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಕಛೇರಿಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಈ ಜನಸಂಪರ್ಕ ಸಭೆಯಲ್ಲಿ ಕಾರ್ಯಕರ್ತರು ಕೂಡ ಕೈಜೋಡಿಸಬೇಕು. ಇದರಿಂದ ಜನರೊಂದಿಗೆ ಬಾಂಧವ್ಯ ಹೆಚ್ಚಿಸಲು ಸಾಧ್ಯ ವಾಗುತ್ತದೆ. ಪಕ್ಷ ಹಾಗೂ ಸರಕಾರ ಇರುವುದು ಜನರ ಸೇವೆಗಾಗಿ. ಪಕ್ಷದ ಕಚೇರಿ ಪಕ್ಷ ಹಾಗೂ ಜನರ ಸೇವೆ ಮಾಡಬೇಕು ಎಂದರು.
ವೇದಿಕೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹಮೂರ್ತಿ, ಮುಖಂಡರಾದ ಪ್ರಖ್ಯಾತ್ ಶೆಟ್ಟಿ, ಕೀರ್ತಿ ಶೆಟ್ಟಿ, ಯತೀಶ್ ಕರ್ಕೇರ, ಸುದೇಶ್ ಪೂಜಾರಿ, ಅಬ್ದುಲ್ ರೆಹಮಾನ್, ಚಂದ್ರಿಕಾ ಶೆಟ್ಟಿ, ಗಣೇಶ್ ನೆರ್ಗಿ, ಅಲ್ತಾಫ್, ಪ್ರಶಾಂತ್ ಪೂಜಾರಿ ಉಪಸ್ಥಿತರಿದ್ದರು.
ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕರೆ ಸ್ವಾಗತಿಸಿದರು. ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.