313 ಎಸೆಸೆಲ್ಸಿ ವಿದ್ಯಾರ್ಥಿಗಳು ತುಳು ಪರೀಕ್ಷೆ ಬರೆಯಲು ಸಜ್ಜು

Update: 2016-12-31 11:29 GMT

ಉಡುಪಿ, ಡಿ.31: ಪ್ರಸ್ತುತ ವರ್ಷ ದ.ಕ. ಮತ್ತು ಉಡುಪಿ ಜಿಲ್ಲೆಯ ಒಟ್ಟು 20 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ 956 ವಿದ್ಯಾರ್ಥಿಗಳು ತುಳುವನ್ನು ಅಧಿಕೃತವಾಗಿ ತೃತೀಯ ಭಾಷೆಯಾಗಿ ಕಲಿಯುತ್ತಿದ್ದು, ಕಳೆದ ವರ್ಷ ಎಸೆಸೆಲ್ಸಿಯಲ್ಲಿ 25ಮಕ್ಕಳು ತುಳು ಪರೀಕ್ಷೆ ಬರೆದಿದ್ದರೆ,  ಈ ವರ್ಷ 313 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ತಿಳಿಸಿದ್ದಾರೆ.

ಉಡುಪಿ ತುಳುಕೂಟದ ಆಶ್ರಯದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆ, ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗದ ಸಹಯೋಗದೊಂದಿಗೆ ಕಾಲೇಜಿನ ಆವರಣದಲ್ಲಿ ಶನಿವಾರ ಜರುಗಿದ ಆಹ್ವಾನಿತ 5,6,7 ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ತುಳು ಪ್ರತಿಭಾ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿಗಳ ಕೈಬರಹದ ತುಳು ಪತ್ರಿಕೆ ‘ಇರ್ಪನಿ’ ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.

ದ.ಕ. ಜಿಲ್ಲೆಯಲ್ಲಿ 19 ಮತ್ತು ಉಡುಪಿ ಜಿಲ್ಲೆಯಲ್ಲಿ ಒಂದು ಶಾಲೆಗಳಲ್ಲಿ ತುಳು ಕಲಿಸಲಾಗುತ್ತಿದೆ. ಪುತ್ತೂರು ತಾಲೂಕು ಒಂದರಲ್ಲಿಯೇ 12 ಶಾಲೆ ಗಳಲ್ಲಿ ತುಳು ಕಲಿಸಲಾಗುತ್ತಿದೆ. ಅದರಲ್ಲಿ ನಾಲ್ಕು ಆಂಗ್ಲ ಮಾಧ್ಯಮ ಶಾಲೆ ಸೇರಿದೆ.

ಕಳೆದ ವರ್ಷ ಎಸೆಸೆಲ್ಸಿ ಪರೀಕ್ಷೆ ಬರೆದ 25 ಮಕ್ಕಳಲ್ಲಿ ಓರ್ವ ವಿದ್ಯಾರ್ಥಿ ತುಳುವಿನಲ್ಲಿ 100ಕ್ಕೆ 100 ಅಂಕ ಪಡೆದಿದ್ದು, ನಾಲ್ವರು 99 ಅಂಕ ಗಳನ್ನು ಪಡೆದಿದ್ದಾರೆ. ಇದೀಗ ತುಳು ಸ್ಕೋರಿಂಗ್ ಪಠ್ಯವಾಗಿಯೂ ಬೆಳೆಯುತ್ತಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಅಕಾಡೆಮಿಯ ಅಧ್ಯಕ್ಷೆ ಜಾನಕಿ ಎಂ. ಬ್ರಹ್ಮಾವರ ಮಾತನಾಡಿ, ತುಳು ಭಾಷೆ ಮಾತನಾಡಲು ಹಿಂದೆ ಇದ್ದ ಕೀಳರಿಮೆ ಈಗ ಇಲ್ಲವಾಗಿದೆ. ತುಳು ಮಾತನಾಡಲು ಅಭಿಮಾನ ಪಡುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ತುಳು ಶಕ್ತಿಯುತವಾದ ಭಾಷೆ. ಇದರಲ್ಲಿ ಎಲ್ಲವೂ ಸಂಪತ್ಬರಿತವಾಗಿದೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ವಹಿಸಿದ್ದರು.

ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ನಾಗರಾಜ್, ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ನಿವೃತ್ತ ಉಪನ್ಯಾಸಕ ಮುರಳೀಧರ ಹಾಲಂಬಿ ಮುಖ್ಯ ಅತಿಥಿಗಳಾಗಿದ್ದರು.

ತುಳುಕೂಟದ ಉಪಾಧ್ಯಕ್ಷ ಮುಹಮ್ಮದ್ ವೌಲಾ, ಕೋಶಾಧಿಕಾರಿ ಚೈತನ್ಯ ಎಂ.ಜಿ., ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷ ಪ್ರಕಾಶ್ ಅಂದಾದ್ರೆ, ಪ್ರೌಢಶಾಲಾ ಮುಖ್ಯಸ್ಥ ವಿಶ್ವನಾಥ ಬಾಯರಿ, ಶಾಲಾ ತುಳು ಸಂಘದ ಕಾರ್ಯದರ್ಶಿ ಶ್ರೇಯಾ ಉಪಸ್ಥಿತರಿದ್ದರು.

ಪ್ರಾಂಶುಪಾಲ ಜಗದೀಶ್ ಕುಮಾರ್ ಸ್ವಾಗತಿಸಿದರು. ತುಳು ಸಂಘದ ಸಂಚಾಲಕ ಯಾದವ ಕರ್ಕೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಶ್ರುತಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News