ಭಟ್ಕಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದ್ದು ಮಾಡಿದ ನಕಲಿ ಬಿಲ್ ಅವಾಂತರ

Update: 2016-12-31 12:12 GMT

ಭಟ್ಕಳ , ಡಿ.31 : ಗುರುವಾರದಂದು ಪುರಸಭಾ ಅಧ್ಯಕ್ಷ ಮುಹಮ್ಮದ್ ಸಾದಿಕ್ ಮಟ್ಟಾ ಅಧ್ಯಕ್ಷತೆಯಲ್ಲಿ ಪುರಭೆಯ ಸಾಮಾನ್ಯ ಸಭೆಯು ಇಲ್ಲಿನ ಪುರಸಭೆಯ ಹಾಲ್‌ನಲ್ಲಿ ನಡೆಯಿತು.

ಸಭೆಯ ಪ್ರಾರಂಭದಲ್ಲಿಯೇ ಕೆಲವು ಪುರಸಭೆಯಲ್ಲಿ ನಡೆದ ಗೋಲಮಾಲ್‌ಗಳ ವಿಚಾರ ಚರ್ಚೆಯಾಗಿದ್ದು , ಅದರಲ್ಲಿ ಮುಖ್ಯವಾಗಿ ನಕಲಿ ಬಿಲ್‌ಬುಕ್ ಸೃಷ್ಟಿ ಮಾಡಿ ಒಂದು (ಮೂಲ) ಪ್ರತಿಯಲ್ಲಿ ಒಂದು ಮೊತ್ತ, (ಇನ್ನೊಂದು)ನಕಲು ಪ್ರತಿಯಲ್ಲಿ ಇನ್ನೊಂದು ಮೊತ್ತ ಬರೆದು ಒಟ್ಟು ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಪುರಸಭೆ ಸಿಬ್ಬಂದಿಯನ್ನು ಕೂಡಲೆ ಕೆಲಸದಿಂದ ವಜಾ ಮಾಡುವಂತೆ ಹಾಗೂ ಅವರ ವಿರುದ್ದ ಪ್ರಕರಣವನ್ನು ದಾಖಲಿಸುವಂತೆ ಸರ್ವ ಸದಸ್ಯರು ಒಮ್ಮತ್ತದಿಂದ ಆಗ್ರಹಿಸಿದರು.

ಪುರಸಭೆಯಿಂದ ಜನರಿಗೆ ಸಿಗಬೇಕಾದ ಕೆಲವು ಸೌಕರ್ಯಗಳ ಪೈಕಿ ನೀರು ಸರಬರಾಜು, ಯುಜಿಡಿಗೆ ಸಂಪರ್ಕ ಸೇರಿದಂತೆ ಇನ್ನಿತರ ಸೌಕರ್ಯಗಳನ್ನು ಇಲ್ಲಿನ ಪುರಸಭಾ ಗುತ್ತಿಗೆದಾರರ ಫ್ಯಾಮಿಲಿಯಲ್ಲಿ ನಕಲಿ ರಶೀದಿ ನೀಡಿ ಜನರ ಹಣವನ್ನು ಗುಳುಂ ಮಾಡಲಾಗುತ್ತಿದೆ. ಇದರಲ್ಲಿ ಗುತ್ತಿಗೆದಾರ ಸೇರಿದಂತೆ ಇನ್ಯಾರು ಶ್ಯಾಮಿಲಾಗಿದ್ದಾರೆಂದು ಸಂಪೂರ್ಣ ತನಿಖೆಯಾಗಬೇಕು ಎಂದು ಪುರಸಭಾ ಸದಸ್ಯರಾದ ನೈತೆ ಅಬುಲ್ ರವೂಫ್, ಉದಯ ಪೈ, ವೆಂಕಟೇಶ ನಾಯ್ಕ, ಪಾಸ್ಕಲ್ ಗೋಮ್ಸ್ ಆಗ್ರಹಿಸಿದರು.

ಇದೇ ಸಂಧರ್ಭದಲ್ಲಿ ಪುರಸಭಾ ಅಧ್ಯಕ್ಷ ಸಾದಿಕ್ ಮಟ್ಟಾ ಮಾತನಾಡಿದ್ದು, " 2 ತಿಂಗಳ ತನ್ನ ಅಧಿಕಾರ ಅವಧಿ ಮಾತ್ರ ಮುಗಿದಿದ್ದು, ಅಷ್ಟರೊಳಗೆ ಈ ಪ್ರಕರಣ ಬೆಳಕಿಗೆ ಬಂದಿದೆ. ಅಂದಾಜಿನ ಪ್ರಕಾರ ಸುಮಾರು 7 ಲಕ್ಷಗಳಷ್ಟು ರೂ.ಗಳು ಪುರಸಭೆಗೆ ಸಂದಾಯವಾಗಬೇಕಿದೆ. 2-3 ದಿನಗಳ ಹಿಂದೆ 2 ಲಕ್ಷ 40 ಸಾವಿರ ರೂ. ಆ ಸಿಬ್ಬಂದಿ ಜಮಾ ಮಾಡಿದ್ದಾರೆ. ದಾಖಲೆಯ ಪ್ರಕಾರ ಇನ್ನು 3 ಲಕ್ಷ 15 ಸಾವಿರ ರೂ.ಗಳಷ್ಟು ಜಮಾ ಆಗಬೇಕಿದೆ. ಇನ್ನೆಷ್ಟು ಅವ್ಯವಹಾರ ನಡೆದಿದೆ ಎಂದು ತನಿಖೆಯಿಂದಲೇ ತಿಳಿಯಬೇಕಿದೆ. ಇನ್ನು ಮುಂದಿನ ದಿನಗಳಲ್ಲಿ ಈ ರೀತಿಯ ಅವ್ಯವಹಾರ ನಡೆಯದಂತೆ ಇತರ ಅಧಿಕಾರಿಗಳು ಮುತುವರ್ಜಿ ವಹಿಸಿ ಕೆಲಸ ಮಾಡಬೇಕು " ಎಂದರು.

ಪುರಸಭೆಯ ಹಣವನ್ನು ಈ ಕೂಡಲೆ ಜಪ್ತು ಮಾಡಬೇಕೇಂದು ತೀರ್ಮಾನಿಸಿ ಈ ಕುರಿತು ಠರಾವು ಮಾಡಿ ಸೂಕ್ತ ಕ್ರಮ ಕೈಗೊಳ್ಳಿ ಎಂದು ಇತರರು ಆಗ್ರಹಿಸಿದರು . ನಂತರ ತನಿಖೆ ನಡೆಸಿ, ಪ್ರಕರಣ ದಾಖಲಿಸುವಂತೆ ಠರಾವು ಮಾಡಲಾಯಿತು.

 ಇದೇ ಸಂಧರ್ಭದಲ್ಲಿ ನಿರ್ಣಯ, ಅಭಿವೃದ್ಧಿ ಕಾರ್ಯಗಳ ಪರೀಶೀಲನೆ, ನೂತನ ರಿಕ್ಷಾಗಳಿಗೆ ಪರವಾನಿಗೆ ನೀಡುವ ಕುರಿತು ಸೇರಿದಂತೆ ಇತರ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು.

ಪ್ರಾಮಾಣಿಕ ಅಧಿಕಾರಿ ಬಲಿಪಶು :

ಬುಧವಾರದಂದು ಎಸಿಬಿ ಪೋಲೀಸ್ ಅಧಿಕಾರಿಗಳ ಬಲೆಗೆ ಬಿದ್ದ ಪುರಸಭಾ ಮುಖ್ಯಾಧಿಕಾರಿ ಎಮ್.ಜಿ.ರಮೇಶ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಬಂಧಿಸಿದ್ದು, ಈ ಬಗ್ಗೆ  ಸಭೆಯಲ್ಲಿ ಚರ್ಚಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ಕೆಲವು ದಿನಗಳ ಹಿಂದೆ ಸಿಬ್ಬಂದಿ ದೀಪಕ ಶೆಟ್ಟಿ ಕುರಿತು ನೀರಿನ ಅವ್ಯವಹಾರದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಪುರಸಭೆ ಮುಖ್ಯಾಧಿಕಾರಿಯ ಮೇಲೆ ದಾಳಿ ನಡೆದಿದೆ ಎಂದು ಕೆಲ ಸದಸ್ಯರು ವಾದಿಸಿದರು.

ನೀರಿನ ಸಂಪರ್ಕಕ್ಕಾಗಿ ನೀಡಿದ ದಾಖಲೆಗಳು ನಕಲಿಯಾಗಿದೆ. ಯಾರದ್ದೋ ಹೆಸರಿನಲ್ಲಿ, ಇನ್ಯಾರದ್ದೂ ಆರ್.ಟಿ.ಸಿ.  ಲಗ್ತಾ ಇಟ್ಟು ನೀರಿನ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ್ದರು. ಸಂಬಂಧವಿಲ್ಲದ 3ನೇ ವ್ಯಕ್ತಿ ಬಿಲ್ ಕಟ್ಟುವ ಹಣವೆಂದು ಮುಖ್ಯಾಧಿಕಾರಿಗೆ ನೀಡಿದ ಸಂದರ್ಭದಲ್ಲಿ ಎಸಿಬಿ ಅಧಿಕಾರಿ ದಾಳಿ ನಡೆಸಿ ಬಂಧಿಸಿದ್ದಾರೆ. ಇದೆಲ್ಲ ಪೂರ್ವಯೋಜಿತ ಸಂಚು ಎಂದು ಸದಸ್ಯ ವೆಂಕಟೇಶ ನಾಯ್ಕ, ಫಯಾಝ್ ಮುಲ್ಲಾ, ಅಬ್ದುಲ್ ರವೂಫ್ ನಾಯ್ತೆ ಮತ್ತು ಇತರ ಸದಸ್ಯರು ಸಭೆಗೆ ತಿಳಿಸಿದರು.

ಈ ಪ್ರಕರಣದಲ್ಲಿ ನೀರಿನ ಸಂಪರ್ಕ ನೀಡುವ ಗುತ್ತಿಗೆದಾರ, ಅರ್ಜಿ ನೀಡಿದ ಮನೆಯವರಿಗೆ ಕರೆದು ತನಿಖೆ ನಡೆಸಬೇಕು. ಪ್ರಾಮಾಣಿಕ ಅಧಿಕಾರಿ ಬಲಿಪಶು ಆಗುವದನ್ನು ತಪ್ಪಿಸಬೇಕು ಎಂಬ ಆಗ್ರಹ ಕೇಳಿಬಂತು.

ಸಭೆಯಲ್ಲಿ ಉಪಾಧ್ಯಕ್ಷ ಅಶ್ಫಾಖ್ ಕೆ.ಎಂ, ಸ್ಥಾಯಿ ಸಮಿತಿ ಅಧ್ಯಕ್ಷ ಕೈಸರ್ ಮೊಹತೆಮ್, ಮಾಜಿ ಅಧ್ಯಕ್ಷೆ ಮಂಜಮ್ಮ ರವೀಂದ್ರ, ಖದೀಯಾ ಬೇಗಂ, ಮುಕ್ರಿ ವಹಿದಾ, ಸೌದಾಗರ ಪರ್ಜಾನಾ, ಮೊಹಿದ್ದೀನ್ ಅಲ್ತಾಫ್ ಖರೂರಿ, ಉದಯ ರಾಮಕೃಷ್ಣ ಪೈ, ಫಯಾರ್ ಮುಲ್ಲಾ, ಪಾಸ್ಕಲ್ ಗೋಮ್ಸ್, ಅಧಿಕಾರಿಗಳಾದ ಆರ್.ಪಿ.ನಾಯಕ, ವೇಣುಗೋಪಾಲ ಶಾಸ್ತ್ರೀ, ವೆಂಕಟೇಶ ನಾವುಡ, ಸೂಜಿಯಾ, ಕಿರಣ ಸೇರಿದಂತೆ ಮತ್ತಿತರರು ಉಪಸ್ಥತರಿದ್ದರು. ((ಫೋಟೊ: 31-ಬಿಕೆಎಲ್-02-ಟಿಎಂಸಿ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News