ಬಗ್ದಾದ್‌ನಲ್ಲಿ ಅವಳಿ ಬಾಂಬ್‌ಸ್ಫೋಟ: 28 ಸಾವು

Update: 2016-12-31 12:29 GMT

ಬಗ್ದಾದ್, ಡಿ.31: ಜನಜಂಗುಳಿಯಿರುವ ಅಲ್-ಸಿನಾಕ್ ಮಾರುಕಟ್ಟೆಯಲ್ಲಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ 28 ಮಂದಿ ಬಲಿಯಾಗಿದ್ದು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಐಸಿಸ್ ಉಗ್ರರು ಬಾಂಬ್‌ದಾಳಿಯ ಹೊಣೆ ಹೊತ್ತಿದ್ದಾರೆ.

  ಮಾರುಕಟ್ಟೆ ಬಳಿ ಇರುವ ಕಾರಿನ ಬಿಡಿಭಾಗದ ಅಂಗಡಿಯ ಸಮೀಪ ರಸ್ತೆ ಬದಿ ಮೊದಲ ಬಾಂಬ್ ಸ್ಫೋಟಗೊಂಡರೆ, ಆತ್ಮಹತ್ಯಾ ಬಾಂಬರ್ ಜನಜಂಗುಳಿಯ ನಡುವೆ ತನ್ನನ್ನು ಸ್ಫೋಟಿಸಿಗೊಂಡಿದ್ದಾನೆ . ಮೃತಪಟ್ಟವರಲ್ಲಿ ಹೆಚ್ಚಿನವರು ಕಾರಿನ ಬಿಡಿಭಾಗದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇರಾಕ್ ರಾಜಧಾನಿ ಬಗ್ದಾದ್‌ನಲ್ಲಿ ಪದೇ ಪದೇ ದಾಳಿಗಳು ನಡೆಯುತ್ತಿದ್ದು ಇವಲ್ಲಿ ಹೆಚ್ಚಿನವು ಶಿಯಾ ಪ್ರಾಭಲ್ಯದ ಜಿಲ್ಲೆಗಳಲ್ಲಿ ಸಂಭವಿಸಿದೆ. ಸೊಂಟದಲ್ಲಿ ಬಾಂಬ್ ಸಿಕ್ಕಿಸಿಕೊಂಡ ತನ್ನ ಇಬ್ಬರು ಆತ್ಮಹತ್ಯಾ ಬಾಂಬರ್‌ಗಳು ಈ ಕೃತ್ಯ ನಡೆಸಿದ್ದಾರೆ ಎಂದು ಐಸಿಸ್ ಹೇಳಿಕೆಯಲ್ಲಿ ತಿಳಿಸಿದೆ.

ಇರಾಕ್‌ಗೆ ಸೇರಿದ ಮೊಸೂಲ್ ಪ್ರಾಂತ್ಯ ಐಸಿಸ್ ಉಗ್ರರ ಸ್ವಾಧೀನ ಇರುವ ಏಕೈಕ ನೆಲೆಯಾಗಿದ್ದು ಇಲ್ಲಿಂದ ಐಸಿಸ್ ಉಗ್ರರನ್ನು ಹೊಡೆದಟ್ಟಲು ಇರಾಕ್ ಪಡೆಗಳು ಕಾರ್ಯಾಚರಣೆ ತೀವ್ರಗೊಳಿಸುತ್ತಿರುವಂತೆಯೇ ಈ ಬಾಂಬ್ ದಾಳಿ ನಡೆದಿದೆ.ಐಸಿಸ್ ವಿರುದ್ಧ ಇರಾಕ್ ಪಡೆಗಳ ಕದನಕ್ಕೆ ಕುರ್ದಿಷ್ ಹೋರಾಟಗಾರರು, ಸುನ್ನಿ ಅರಬ್ ಬುಡಕಟ್ಟು ಜನರು ಮತ್ತು ಅಮೆರಿಕಾ ನೇತೃತ್ವದ ಮಿತ್ರಪಡೆಗಳು ನೆರವು ನೀಡುತ್ತಿವೆ.

ನವೆಂಬರ್‌ನಲ್ಲಿ ಇರಾಕ್‌ನಲ್ಲಿ ನಡೆದ ಟ್ರಕ್ ಬಾಂಬ್ ಸ್ಫೋಟಕ್ಕೆ ಶಿಯಾ ಯಾತ್ರಾರ್ಥಿಗಳು ಸೇರಿದಂತೆ 77 ಮಂದಿ ಬಲಿಯಾಗಿದ್ದರೆ, ಜುಲೈಯಲ್ಲಿ ಶಾಪಿಂಗ್ ಮಾಲ್‌ನಲ್ಲಿ ನಡೆದ ಬಾಂಬ್‌ಸ್ಫೋಟಲ್ಲಿ 281 ಮಂದಿ ಸಾವನ್ನಪ್ಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News