ಕೊರಗರು, ಜೇನು ಕುರುಬರಿಗೆ ಒಳಮೀಸಲಾತಿಗೆ ಪ್ರಯತ್ನ : ಸಚಿವ ಆಂಜನೇಯ

Update: 2016-12-31 12:32 GMT

ಮೂರೂರು (ಬೈಂದೂರು), ಡಿ.31 : ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಈಗಲೂ ತೀರಾ ಹಿಂದುಳಿದಿರುವ ಜಿಲ್ಲೆಯ ಮೂಲನಿವಾಸಿಗಳಾದ ಕೊರಗರು ಹಾಗೂ ಜೇನು ಕುರುಬರಿಗೆ ಶಿಕ್ಷಣ ಹಾಗೂ ಉದ್ಯೋಗಗಳಲ್ಲಿ ಒಳ ಮೀಸಲಾತಿ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಮೀಸಲಾತಿ ನೀತಿಯಲ್ಲಿ ಮಾರ್ಪಾಡು ಮಾಡುವ ಬಗ್ಗೆ ಕೇಂದ್ರ ಸರಕಾರದೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ರಾಜ್ಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು ಹೇಳಿದ್ದಾರೆ.

ಕುಂದಾಪುರ ತಾಲೂಕಿನ ಬೈಂದೂರು ವಿಧಾನಸಭಾ ಕ್ಷೇತ್ರದ ಕಾಲ್ತೋಡು ಗ್ರಾಪಂ ವ್ಯಾಪ್ತಿಯ ಮೂರೂರು ಗ್ರಾಮದಲ್ಲಿರುವ ಕೊರಗ ಕಾಲನಿಯಲ್ಲಿರುವ ಮರ್ಲಿ ಕೊರಗ ಕುಟುಂಬದೊಂದಿಗೆ ಇಂದು ರಾತ್ರಿ ವಾಸ್ತವ್ಯ ಮಾಡಿ, ಹೊಸ ವರ್ಷವನ್ನು ಆಚರಿಸಲು ಆಗಮಿಸಿದ ಸಚಿವರು ಗ್ರಾಮದಲ್ಲಿ ಇಲಾಖೆ ಆಯೋಜಿಸಿದ ಬೃಹತ್ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡುತಿದ್ದರು.

ರಾಜ್ಯದಲ್ಲಿ ಪರಿಶಿಷ್ಟ ಪಂಗಡ, ಬುಡಕಟ್ಟು ಜನಾಂಗದಲ್ಲಿ ಒಟ್ಟು 50 ಜಾತಿಗಳಿವೆ. ಇವುಗಳಲ್ಲಿ 15 ಜಾತಿಗಳು ಈಗಲೂ ಕಾಡುಗಳನ್ನೇ ಆಶ್ರಯಿಸಿದ್ದರೆ, ಉಳಿದ 35 ಜಾತಿಗಳು ನಗರಗಳಲ್ಲಿ ತಮ್ಮ ನೆಲೆಗಳನ್ನು ವಿಸ್ತರಿಸಿವೆ. ಪರಿಶಿಷ್ಟ ಪಂಗಡದಲ್ಲಿರುವ ಕೊರಗ ಮತ್ತು ಜೇನು ಕುರುಬ ಜನಾಂಗ ಈಗಲೂ ಅಂಚಿಗೆ ತಳಲ್ಪಟ್ಟಿವೆ. ಅವುಗಳು ಅತೀಸೂಕ್ಷ್ಮ ಜನಾಂಗಗಳಲ್ಲಿ ಸೇರಿವೆ. ವರ್ಷದಿಂದ ವರ್ಷಕ್ಕೆ ಅವುಗಳ ಜನಸಂಖ್ಯೆ ಕಡಿಮೆಯಾಗುತ್ತಿವೆ. ಈ ಎರಡು ಜನಾಂಗಗಳನ್ನು ಮೇಲಕ್ಕೆತ್ತಲು ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದರು.

ಕೊರಗರಿಗೆ ಉನ್ನತ ಶಿಕ್ಷಣ, ವೃತ್ತಿಪರ ಶಿಕ್ಷಣದಂತೆ ಉದ್ಯೋಗದಲ್ಲೂ ಮೀಸಲಾತಿ ಸೌಲಭ್ಯ ದೊರಕುತ್ತಿಲ್ಲ. ಈ ಕಾರಣಗಳಿಗಾಗಿ ಒಳ ಮೀಸಲಾತಿ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಇದು ಕೇಂದ್ರ ಸರಕಾರದ ವಿಷಯವಾಗಿದ್ದರಿಂದ, ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಈ ಬಗ್ಗೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವುದು. ಅಲ್ಲಿಂದ ಬಂದ ತಕ್ಷಣ ಅದನ್ನು ಜಾರಿಗೊಳಿಸಲಾಗುವುದು ಎಂದರು.

ಈ ನಡುವೆ ಜನಾಂಗವನ್ನು ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಮೇಲಕ್ಕೆತ್ತಲು ಹಲವು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಕೊರಗ ಮಕ್ಕಳಿಗೆ ಪ್ರಾಥಮಿಕ ಶಾಲಾ ಹಂತದಿಂದ ಉನ್ನತ ಶಿಕ್ಷಣದವರೆಗೆ ಪ್ರತಿ ವರ್ಷ ಸ್ಟೈಪೆಂಡ್‌ನ್ನು ನೀಡಲಾಗುತ್ತಿದೆ. ಅರಣ್ಯ ಕಾಯ್ದೆಯಡಿ ಅಗತ್ಯ ಉಳ್ಳವರಿಗೆ ಹಕ್ಕುಪತ್ರ ವಿತರಿಸಲಾಗುವುದು, ಅದೇ ರೀತಿ ಸಾಲಸೌಲಭ್ಯವನ್ನು ಒದಗಿಸಲಾಗುವುದು ಎಂದರು.
 

ಉಚಿತ ಪಡಿತರ:

ಕೊರಗರಿಗೆ ವರ್ಷದ ಆರು ತಿಂಗಳು ಅಂದರೆ ಜೂನ್‌ನಿಂದ ಡಿಸೆಂಬರ್‌ವರೆಗೆ ಉಚಿತ ಪಡಿತರ ನೀಡಲಾಗುತ್ತಿದೆ. ಇವುಗಳಲ್ಲಿ 15 ಕೆ.ಜಿ.ಅಕ್ಕಿ, 4 ಕೆ.ಜಿ.ಮನೆಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ವಿದ್ಯುತ್ ಇಲ್ಲದ ಕಡೆಗಳಲ್ಲಿ ಸೋಲಾರ್ ದೀಪಗಳನ್ನು ನೀಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News