×
Ad

ಅಮೆರಿಕದ ವಿದ್ಯುತ್ ಜಾಲ ಭೇದಿಸಿದ ರಶ್ಯಾದ ಹ್ಯಾಕರ್‌ಗಳು

Update: 2016-12-31 23:55 IST

ವಾಷಿಂಗ್ಟನ್, ಡಿ.31: ವೆರ್ಮಾಂಟ್ ಪ್ರಾಂತದ ಸಾರ್ವಜನಿಕ ವ್ಯವಸ್ಥೆಯಲ್ಲಿ ರಶ್ಯಾದ ಹ್ಯಾಕರ್‌ಗಳು ನಡೆಸಿದ ಯತ್ನಗಳಿಗೆ ಸಂಬಂಧಿಸಿದ ಕೋಡ್‌ವರ್ಡ್ ಪತ್ತೆಯಾಗುವ ಮೂಲಕ ಅಮೆರಿಕದ ವಿದ್ಯುತ್ ಜಾಲದ ಸುರಕ್ಷಾ ವ್ಯವಸ್ಥೆಯ ದೌರ್ಬಲ್ಯ ಬೆಳಕಿಗೆ ಬಂದಿದ ಎಂದು 'ವಾಷಿಂಗ್ಟನ್ ಪೋಸ್ಟ್' ವರದಿ ಮಾಡಿದೆ. ಇದೊಂದು ಕೊಳಕು ಯತ್ನ ಎಂದು ಪ್ರತಿಕ್ರಿಯಿಸಿರುವ ಅಮೆರಿಕ ಅಧಿಕಾರಿಗಳು, ಸಾರ್ವಜನಿಕ ವ್ಯವಸ್ಥೆಯ ಕಾರ್ಯನಿರ್ವಹಣೆಗೆ ಇದರಿಂದ ಯಾವುದೇ ಅಡ್ಡಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸರಕಾರವು ಗುರುವಾರ ರಾತ್ರಿ ಎಚ್ಚರಿಕೆ ನೀಡಿದ ಬಳಿಕ ತನ್ನ ಕಂಪ್ಯೂಟರ್ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಒಂದು ಲ್ಯಾಪ್‌ಟಾಪ್‌ಗೆ ಮಾಹಿತಿ ಕದಿಯಬಲ್ಲ ವ್ಯವಸ್ಥೆಯನ್ನು ಜೋಡಿಸಿರುವುದು ಪತ್ತೆಯಾಗಿದೆ ಎಂದು ಬರ್ಲಿಂಗ್‌ಟನ್ ಇಲೆಕ್ಟ್ರಿಕ್ ಡಿಪಾರ್ಟ್‌ಮೆಂಟ್ ತಿಳಿಸಿದೆ. ಆದಾಗ್ಯೂ ಈ ಲ್ಯಾಪ್‌ಟಾಪ್ ವಿದ್ಯುತ್ ಜಾಲದೊಡನೆ ಸಂಪರ್ಕ ಹೊಂದಿರಲಿಲ್ಲ. ಬಳಿಕ ಲ್ಯಾಪ್‌ಟಾಪ್ ಅನ್ನು ಪ್ರತ್ಯೇಕಿಸಲಾಯಿತು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ರಶ್ಯಾದ ಹ್ಯಾಕರ್‌ಗಳು ವಿದ್ಯುತ್ ಜಾಲವನ್ನು ಯಾಕೆ ಗುರಿಯಾಗಿರಿಸಿಕೊಂಡರು ಎಂಬ ಬಗ್ಗೆ ಅಮೆರಿಕ ಅಧಿಕಾರಿಗಳಿಗೆ ಇನ್ನೂ ಸ್ಪಷ್ಟವಾಗಿಲ್ಲ. ಸಾರ್ವಜನಿಕ ವ್ಯವಸ್ಥೆಯನ್ನು ಹಾಳುಗೆಡಹುವ ಅಥವಾ ವಿದ್ಯುತ್ ಜಾಲದ ಒಂದು ಭಾಗವನ್ನು ಭೇದಿಸುವ ಯತ್ನ ಇದಾಗಿರಬಹುದು ಎಂದು ನಂಬಲಾಗಿದೆ. 2015ರ ಡಿಸೆಂಬರ್‌ನಲ್ಲಿ ಉಕ್ರೇನ್‌ನ ಪಶ್ಚಿಮ ಭಾಗದಲ್ಲಿ ಸಂಭವಿಸಿದ ವಿದ್ಯುತ್ ವೈಫಲ್ಯದಿಂದ ಉಕ್ರೇನ್‌ನ ಅರ್ಧಭಾಗ ಕತ್ತಲಲ್ಲಿ ಮುಳುಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News