ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ದೂರು ದಾಖಲು
ಮಂಗಳೂರು, ಜ.2: ಪ್ರಚೋದನಾಕಾರಿ ಹೇಳಿಕೆ ನೀಡಿದ ಸಂಸದ ನಳಿನ್ ಕುಮಾರ್ ಕಟೀಲು ವಿರುದ್ಧ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೊಣಾಜೆ ಠಾಣೆಗೆ ದೂರು ದಾಖಲಿಸಲಾಗಿದೆ.
ಮಂಗಳೂರು ತಾಪಂ ಮಾಜಿ ಉಪಾಧ್ಯಕ್ಷ ಉಮೇಶ್ ಗಾಣಿಗ ಅವರ ಪುತ್ರ ಕಾರ್ತಿಕ್‌ರಾಜ್ ಹತ್ಯೆ ಆರೋಪಿಗಳ ಪತ್ತೆಗೆ ಆಗ್ರಹಿಸಿ ರವಿವಾರ ಕೊಣಾಜೆ ಠಾಣೆ ಎದುರು ನಡೆದ ಪ್ರತಿಭಟನೆ ವೇಳೆ ಸಂಸದ ನಳಿನ್ ಕುಮಾರ್ ಕಟೀಲು " ಜಿಲ್ಲೆಗೆ ಬೆಂಕಿ ಹಚ್ಚುತ್ತೇನೆ" ಎಂಬ ಹೇಳಿಕೆ ನೀಡಿದ್ದರು.
ಪ್ರಚೋದನಾಕಾರಿ ಭಾಷಣದ ಮೂಲಕ ಜಿಲ್ಲೆಯ ಜನರಿಗೆ ಭಯದ ವಾತಾವರಣವನ್ನು ಉಂಟು ಮಾಡಿರುವುದಕ್ಕೆ ಅವರನ್ನು ಬಂಧಿಸಿ ತಕ್ಷಣ ಅವರ ವಿರುದ್ದ ಮೊಕದ್ದಮೆಗಳನ್ನು ದಾಖಲಿಸಿ ಕಾನೂನು ಕ್ರಮಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ, ಪಜೀರು ಗ್ರಾಪಂ ಅಧ್ಯಕ್ಷ ಸೀತಾರಾಮ್ ಶೆಟ್ಟಿ, ಕಾಂಗ್ರೆಸ್ ಮುಖಂಡ ಉಮ್ಮರ್ ಫಜೀರ್, ರಹಿಮಾನ್ ಕೋಡಿಜಾಲ್, ರಮೇಶ್ ಶೆಟ್ಟಿ ಬೊಳಿಯಾರ್, ರವಿರಾಜ್ ಶೆಟ್ಟಿ, ಶೌಕತ್ ಅಲಿ, ನಝರ್ ಶಾ, ಮಹಾಬಲ ಹೆಗ್ಡೆ ಮತ್ತಿತರಿದ್ದರು.