ಕಾಸರಗೋಡು: ಬಿಜೆಪಿಯ ಪಾದಯಾತ್ರೆ ಮೇಲೆ ಕಲ್ಲೆಸೆತ
ಕಾಸರಗೋಡು, ಜ.2: ಬಿಜೆಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿದ್ದ ಪಾದಯಾತ್ರೆ ಮೇಲೆ ಕಿಡಿಗೇಡಿಗಳು ಕಲ್ಲೆಸೆದ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೆದ್ದ ಘಟನೆ ನಡೆದಿದೆ.
ಸಿಪಿಎಂನ ಹಿಂಸಾಚಾರ ಮತ್ತು ಅಹಿಷ್ಣುತೆ ಘೋಷಣೆಯಡಿ ಬಿಜೆಪಿ ಜಿಲ್ಲಾ ಸಮಿತಿ ಚೆರ್ವತ್ತೂರಿನಿಂದ ಚಿಮೇನಿ ತನಕ ಪಾದಯಾತ್ರೆ ಹಮ್ಮಿಕೊಂಡಿತ್ತು.
ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್ ನೇತೃತ್ವದಲ್ಲಿ ಸೋಮವಾರ ಮಧ್ಯಾಹ್ನ ಹಮ್ಮಿಕೊಂಡ ಪಾದಯಾತ್ರೆ ಮೇಲೆ ಕಲ್ಲು ತೂರಾಟ ನಡೆದಿದೆ. ತಕ್ಷಣ ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಹಿಂಸಾಚಾರದಲ್ಲಿ ಐದಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಕೆ.ಪಿ ಶ್ರೀಶನ್ ಪಾದಯಾತ್ರೆಗೆ ಚಾಲನೆ ನೀಡಿ ಪಾದಯಾತ್ರೆ ಅಲ್ಪ ದೂರ ತಲುಪುತ್ತಿದ್ದಂತೆ ಕಲ್ಲೆಸೆತ ಉಂಟಾಗಿದ್ದು, ಈ ಸಂದರ್ಭದಲ್ಲಿ ಬಿಜೆಪಿ ಮತ್ತು ಸಿಪಿಎಂ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ.
ಹಿಂಸಾಚಾರವನ್ನು ತಡೆಯಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಪರಿಸ್ಥಿತಿ ಹತೋಟಿಗೆ ಬಾರದ ಹಿನ್ನೆಲೆಯಲ್ಲಿ ಅಶ್ರುವಾಯು ಬಳಸಿದರು. ಘರ್ಷಣೆ, ಲಾಠಿ ಪ್ರಹಾರ ಮತ್ತು ಅಶ್ರುವಾಯು ಬಳಕೆಯಿಂದ ಹಲವು ಮಂದಿ ಗಾಯಗೊಂಡಿದ್ದಾರೆ.ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನೆಲೆಸಿದ್ದು , ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದಾರೆ.