ಮೂಲಭೂತ ಹಕ್ಕಿಗಾಗಿ ಭಿಕ್ಷೆ ಬೇಡುವಂತಾಗಿದೆ: ಎ.ಕೆ. ಅಶ್ರಫ್
ಮೂಲಭೂತ ಹಕ್ಕಿಗಾಗಿ ಬಿಕ್ಷೆ ಬೇಡುವ ದುಸ್ಥಿತಿ: ಎ.ಕೆ. ಅಶ್ರಫ್ ಖಂಡನೆ
ಬಜ್ಪೆ, ಜ.2: ಮೂಲಸೌಕರ್ಯ ಕಲ್ಪಿಸಿಲ್ಲ ಎಂದು ಆರೋಪಿಸಿ ಕೊಳಂಬೆ ಪುನರ್ವಸತಿ ಅಭಿವೃದ್ಧ್ದಿ ಹಾಗೂ ನಾಗರಿಕ ಸಮಿತಿ ಕಾರ್ಯಕರ್ತರು ಸೋಮವಾರ ಕಂದಾವರ ಗ್ರಾಮ ಪಂಚಾಯತ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್‌ಡಿಪಿಐ ಮುಲ್ಕಿ-ಮೂಡಬಿದಿರೆ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಎ.ಕೆ.ಅಶ್ರಫ್, ಮಂಗಳೂರು ವಿಮಾನ ನಿಲ್ದಾಣದ ಭೂಸ್ವಾಧೀನದ ಸಂದರ್ಭದಲ್ಲಿ ಜಮೀನು ಕಳೆದುಕೊಂಡ ನಾಗರಿಕರ ಪುನರ್ವಸತಿಗಾಗಿ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಗೊಳಪಡುವ ಕೊಳಂಬೆಯಲ್ಲಿ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ, ಗ್ರಾಮಸ್ಥರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದು, ಆಡಳಿತ ವರ್ಗ ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿದರು.
ಜನ ಸಾಮಾನ್ಯರಿಗೆ ದೊರೆಕಬೇಕಾದ ಮೂಲಭೂತ ಹಕ್ಕುಗಳನ್ನು ಪಡೆಯಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಭಿಕ್ಷೆ ಬೇಡುವ ಹೀನಾಯ ಪರಿಸ್ಥಿತಿ ದುರಾಗಿದರುವುದು ಖಂಡನೀಯ ಎಂದರು.
ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸಬೇಕಾದ ಸಂಸದರು ಕೋಮುದ್ವೇಷವನ್ನು ಹರಡುವ ಹೇಳಿಕೆಯನ್ನು ನೀಡುತ್ತಿದ್ದಾರೆ. ಇನ್ನೊಂದೆಡೆ ಶಾಸಕರು ಕೊಳಂಬೆಯ ಸಮಸ್ಯೆ ಅರಿತಿದ್ದರೂ ತನಗೂ ಸಮಸ್ಯೆಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಜನಸಾಮಾನ್ಯರಿಗೆ ನ್ಯಾಯ ಒದಗಿಸಿಕೊಡಲು ಸಾಧ್ಯವಿಲ್ಲ ಎಂದಾದರೆ ಜನಪ್ರತಿನಿಧಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆಯನ್ನು ಎದುರಿಸಲಿ ಎಂದು ಅಶ್ರಫ್ ಸವಾಲೊಡ್ಡಿದರು.
ಬಳಿಕ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ.ಇಬ್ರಾಹೀಂ, ಗ್ರಾಮ ಪಂಚಾಯತ್ ಅಧ್ಯಕ್ಷ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಆಗಮಿಸಿ ಪ್ರತಿಭಟನಾ ನಿರಂತರ ಸಮಸ್ಯೆಯನ್ನು ಆಲಿಸಿ, ಮಂಗಳವಾರ ಕೊಳಂಬೆಯಲ್ಲಿ ಸಾರ್ವಜನಿಕ ಸಭೆ ಕರೆದು ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆ ನೀಡಿದರು. ಆ ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು.
ಪ್ರತಿಭಟನೆಯಲ್ಲಿ ಕೊಳಂಬೆ ಹೋರಾಟ ಸಮಿತಿ ಅಧ್ಯಕ್ಷ ಅಬ್ದುಲ್ ಸಮದ್, ಗೌರವಾಧ್ಯಕ್ಷ ಎ.ಮಯ್ಯದ್ದಿ, ಉಪಾಧ್ಯಕ್ಷ ರಾಧಾಕೃಷ್ಣ, ಕಾರ್ಯದರ್ಶಿ ನಿಸಾರ್, ರಿಯಾಝ್, ವಿಠ್ಠಲ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.