ಸುಳ್ಯದಲ್ಲಿ ಪೂರ್ಣಪ್ರಮಾಣದ ಹಿರಿಯ ವಿಭಾಗದ ಸಿವಿಲ್ ನ್ಯಾಯಾಲಯ ಕಾರ್ಯಾರಂಭ

Update: 2017-01-02 11:34 GMT

ಸುಳ್ಯ , ಜ.2 : ಸುಳ್ಯಕ್ಕೆ ಹಿರಿಯ ವಿಭಾಗದ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಮಂಜೂರುಗೊಂಡಿದ್ದು, ಸೋಮವಾರ ಅದರ ಅಧಿಕೃತ ಉದ್ಘಾಟನೆ ನಡೆಯಿತು.

2 ವರ್ಷಗಳ ಹಿಂದೆ ವಾರದಲ್ಲಿ ಒಂದು ದಿನ ಪುತ್ತೂರಿನ ಸಂಚಾರಿ ನ್ಯಾಯಾಲಯ ಸುಳ್ಯದಲ್ಲಿ ಕಾರ್ಯಾಚರಿಸುತ್ತಿದ್ದು, ಬಳಿಕ ಅದು ವಅರದಲ್ಲಿ ಎರಡು ದಿನ ನಡೆಯುತ್ತಿತ್ತು. ಇದೀಗ ಅದು ಪೂರ್ಣ ಪ್ರಮಾಣದ ನ್ಯಾಯಾಲಯವಾಗಿ ಪರಿವರ್ತನೆಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ ಹಾಗೂ ಸುಳ್ಯದ ವಕೀಲರ ಸಂಘದ ಸಹಯೋಗದಲ್ಲಿ ಉದ್ಘಾಟನೆ ನಡೆಯಿತು.

ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕೆ.ಎಸ್.ಬೀಳಗಿ ನೂತನ ನ್ಯಾಯಾಲಯವನ್ನು ಉದ್ಘಾಟಿಸಿದರು.

ನಾಯಕನಾದವನು ಸಮಯ ಪರಿಪಾಲನೆ ಮಾಡಿದರೆ ಉಳಿದವರು ಅದನ್ನು ಅನುಸರಿಸುತ್ತಾರೆ. ನ್ಯಾಯಾಧೀಶರು ಬಡ ಕಕ್ಷಿದಾರರ ನ್ಯಾಯಕ್ಕೆ ಸ್ಪಂದಿಸಬೇಕು. ವಕೀಲರು ಹಸನ್ಮುಖಿಯಾಗಿರಬೇಕು. ನಿರಂತರ ಓದುವ ಜೊತೆಗೆ ಸಮಯಕ್ಕೆ ತಕ್ಕಂತೆ ಜಾಣ್ಮೆಯನ್ನು ಹೊಂದಿರುಬೇಕು. ವಕೀಲರ ವೃತ್ತಿ ಶ್ರೇಷ್ಠವಾದದ್ದು, ಅದನ್ನು ಗೌರವಿಸಬೇಕು. ನ್ಯಾಯದಾನ ಮಾಡುವ ಪ್ರಕ್ರಿಯೆಯಲ್ಲಿ ವಕೀಲರ ಪಾತ್ರ ಮಹತ್ವದ್ದು, ದೀಪದ ಬತ್ತಿ ನ್ಯಾಯಾಧೀಶರಾದರೆ ವಕೀಲರು ಎಣ್ಣೆಯ ಹಾಗೆ. ಪರಸ್ಪರ ಕೈಜೋಡಿಸಿದರೆ ನ್ಯಾಯಾಂಗ ರಥವನ್ನು ಸುಲಭದಲ್ಲಿ ಕೊಂಡೊಯ್ಯಬಹುದು ಎಂದವರು ಹೇಳಿದರು.

ಇದುವರೆಗೆ ನ್ಯಾಯಾಧೀಶರಾಗಿದ್ದ ವಿ.ನಾಗರಾಜ್ ಅವರನ್ನು ಸಮಾರಂಭದಲ್ಲಿ ಬೀಳ್ಕೊಡಲಾಯಿತು. ಎರಡುವ ವರ್ಷಗಳ ಕಾಲ ಸಹಕರಿಸಿದ ಎಲ್ಲರಿಗೂ ವಿ.ನಾಗರಾಜ್ ಕೃತಜ್ಞತೆ ಸಲ್ಲಿಸಿದರು.

ನೂತನ ನ್ಯಾಯಾಧೀಶ ಎಂ.ಪುರುಷೋತ್ತಮ ಅವರನ್ನು ಗೌರವಿಸಲಾಯಿತು. ಶೀಘ್ರ ನ್ಯಾಯದಾನ ಮಾಡಲು ವಕೀಲರ ಸಹಕಾರ ಬೇಕು ಎಂದವರು ವಿನಂತಿಸಿದರು.

ವಕೀಲರ ಸಂಘದ ಅಧ್ಯಕ್ಷ ನಳಿನ್ ಕುಮಾರ್ ಕೋಡ್ತುಗುಳಿ ಅಧ್ಯಕ್ಷತೆ ವಹಿಸಿದ್ದರು.

ಸುಳ್ಯಕ್ಕೆ ಹಿರಿಯ ವಿಭಾಗದ ಸಿವಿಲ್ ನ್ಯಾಯಾಲಯ ಮಂಜೂರಾಗಲು ಮೂಲ ಕಾರಣರದ ಹಿರಿಯ ವಕೀಲ ಬಿ.ವೆಂಕಪ್ಪ ಗೌಡರನ್ನು ಸಮಾರಂಭದಲ್ಲಿ ಗೌರವಿಸಲಾಯಿತು.

ಸಿವಿಲ್ ನ್ಯಾಯಾಧೀಶ ಎಸ್.ಸರವಣನ್ ಸ್ವಾಗತಿಸಿದರು , ವಕೀಲರ ಸಂಘದ ಕಾರ್ಯದರ್ಶಿ ಶ್ರೀಹರಿ ಕುಕ್ಕುಡೇಲು ವಂದಿಸಿದರು. ದಳ ಸುಬ್ರಾಯ ಭಟ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News