×
Ad

ಸಂಸದ ನಳಿನ್ ಪ್ರಚೋದನಕಾರಿ ಹೇಳಿಕೆ : ಕಾಂಗ್ರೆಸ್ ನಿಂದ ಕೊಣಾಜೆ ಪೊಲೀಸ್ ಠಾಣೆಗೆ ದೂರು

Update: 2017-01-02 19:51 IST

ಕೊಣಾಜೆ , ಜ.2 : ಅಸೈಗೋಳಿಯ ಕೊಣಾಜೆ ಪೊಲೀಸ್ ಠಾಣೆಯೆದುರು ರವಿವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕಾರ್ತಿಕ್‌ರಾಜ್ ಕೊಲೆ ಪ್ರಕರಣದ ಆರೋಪಿಗಳನ್ನು ಹತ್ತು ದಿನದೊಳಗೆ ಬಂಧಿಸದಿದ್ದರೆ ದ.ಕ.ಜಿಲ್ಲೆಗೆ ಬೆಂಕಿ ಹಚ್ಚಲು ಸಿದ್ದರಿದ್ದೇವೆ ಎಂಬ ಪ್ರಚೋದನಕಾರಿ ಹೇಳಿಕೆಯ ವಿರುದ್ದ ಉಳ್ಳಾಲ ವಲಯ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಸೋಮವಾರ ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಾರೆ.

 ಅಮಾಯಕ ಜನರು ನ್ಯಾಯಯುತ ಬೇಡಿಕೆಗಾಗಿ ಮೌನ ಪ್ರತಿಭಟನೆ ನಡೆಸುತ್ತಿದ್ದಾಗ ಸಂಸದ ನಳಿನ್ ಅವರು ಈ ಸಂದರ್ಭವನ್ನು ದುರುಪಯೋಗ ಪಡಿಸಿ ಆಕ್ರೋಶಕಾರಿ ಮಾತುಗಳನ್ನು ಆಡುವ ಮೂಲಕ ಜನರಿಗೆ ದಂಗೆ ಏಳುವಂತೆ ಪ್ರಚೋದನೆ ನೀಡಿರುತ್ತಾರೆ. ಇನ್ನು ಹತ್ತು ದಿನದೊಳಗೆ ಹಂತಕರನ್ನು ಬಂಧಿಸದಿದ್ದರೆ ಇಡೀ ಜಿಲ್ಲೆ ಬೆಂಕಿ ಹಚ್ಚುವುದಾಗಿ ಘೋಷಿಸಿದ್ದಾರೆ. ಜಿಲ್ಲೆಯ ಜವಾಬ್ಧಾರಿತ ಸಂಸದನಾಗಿ ಜಿಲ್ಲೆಯ ಜನರ ಪ್ರಾಣ ಹಾಗೂ ಆಸ್ತಿಪಾಸ್ತಿಗಳಿಗೆ ರಕ್ಷಣೆ ನೀಡಬೇಕಾದಂತಹ ಜವಬ್ಧಾರಿಯುತ ಸ್ಥಾನದಲ್ಲಿರುವ ನಳಿನ್ ಕುಮಾರ್ ಕಟೀಲ್ ಅವರು ಈ ರೀತಿ ಹೇಳಿಕೆ ನೀಡಿರುವುದು ದುರಂತವೇ ಸರಿ. ಈ ರೀತಿಯ ಬೆಂಕಿ ಉಗುಳುವ ಭಾಷಣದ ಮೂಲಕ ಜಿಲ್ಲೆಯ ಜನರಿಗೆ ಭಯದ ವಾತಾವರಣವನ್ನು ಉಂಟುಮಾಡಿರುವುದಕ್ಕೆ ತಕ್ಷಣ ಅವರನ್ನು ಬಂಧಿಸಿ ಪ್ರಚೋದನಕಾರಿ ಹೇಳಿಕೆ ನೀಡಿದಕ್ಕಾಗಿ ಮೊಕದ್ದಮೆಗಳನ್ನು ದಾಖಲಿಸಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.

 ಪೊಲೀಸರಿಗೆ ಮನವಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್‌ನ ಅಧ್ಯಕ್ಷ ಮಿಥುನ್ ರೈ, ಸೌಹಾರ್ದಯುತ ಜಿಲ್ಲೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಉದ್ರೇಕಕಾರಿ ಭಾಷಣ ಮಾಡುವ ಮೂಲಕ ಜಿಲ್ಲೆಯಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಿದ್ದಾರೆ. ಈಗಾಗಲೇ ಸಿಓಡಿಗೆ ಪ್ರಕರಣವನ್ನು ಒಪ್ಪಿಸುವಂತೆ ಒತ್ತಾಯಿಸಲಾಗಿದೆ. ಈ ನಡುವೆ ನಳಿನ್ ಅವರು ಜಿಲ್ಲೆಗೆ ಬೆಂಕಿ ಹಚ್ಚುತ್ತೇವೆ ಎಂದು ಹೇಳಿರುವುದು ಸೌಹರ್ದತೆಗೆ ಧಕ್ಕೆ ತಂದಿದೆ. ಬಿಜೆಪಿಯವರು ರಾಜಕೀಯ ಲಾಭಕ್ಕಾಗಿ ಏನು ಮಾಡಲೂ ಹೇಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪಜೀರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೀತರಾಮ ಶೆಟ್ಟಿ ಮಾತನಾಡಿ, ಕೊಲೆಯಾದ ಕಾರ್ತಿಕ್ ತಂದೆ ನನ್ನ ಗೆಳೆಯ, ಮೌನ ಪ್ರತಿಭಟನೆ ಎಂದು ನಾನೂ ಭಾಗವಹಿಸಿದ್ದೆ. ಆದರೆ ಈ ಸಂದರ್ಭದಲ್ಲಿ ಈ ರೀತಿ ಉದ್ರೇಕಕಕಾರಿ ಭಾಷಣ ಮಾಡುವುದನ್ನು ಊಹಿಸಿರಲಿಲ್ಲ. ಈ ಘಟನೆ ಬೇಸರ ತಂದಿದೆ ಎಂದರು.

 ಕಾಂಗ್ರೆಸ್ ಮುಖಂಡರಾದ ಉಮ್ಮರ್ ಪಜೀರು, ಅಬ್ದುಲ್ ರಹಿಮಾನ್ ಕೋಡಿಜಾಲ್, ರಮೇಶ್ ಶೆಟ್ಟಿ, ರವಿರಾಜ್ ಶೆಟ್ಟಿ, ಶೌಕತ್ ಆಲಿ, ನಝರ್ ಷಾ, ಮಹಾಬಲ ಶೆಟ್ಟಿ, ಗಣೇಶ್ ಶೆಟ್ಟಿ ತಲಪಾಡಿ, ಪದ್ಮನಾಭ ಮುಟ್ಟಿಂಜ, ಸುರೇಖಾ ಚಂದ್ರಹಾಸ್, ಹೇಮಾ, ದೇವಕಿ ಉಳ್ಳಾಲ್, ಪದ್ಮಾವತಿ, ಸುಲೈಮಾನ್ ಹಾಜಿ, ಸಿದ್ದೀಕ್ ತಲಪಾಡಿ, ಎನ್.ಎಸ್.ಕರೀಂ, ಲುಕ್ಮಾನ್, ಹೈದರ್ ಕೈರಂಗಳ, ನಾಸೀರ್ ಸಾಮಣಿಗೆ, ಸಿದ್ದೀಕ್ ಕಿನ್ಯಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News