ಸಂಸದ ಕಟೀಲ್ ಪ್ರಚೋದನಾಕಾರಿ ಹೇಳಿಕೆಗೆ ವೆಲ್ಫೇರ್ ಪಾರ್ಟಿ ಯಿಂದ ಖಂಡನೆ

Update: 2017-01-02 14:25 GMT

ಮಂಗಳೂರು, ಜ.2 : ಕೊಣಾಜೆ ಫಜೀರು ಗ್ರಾಮದ   ಕಾರ್ತಿಕ್‍ರಾಜ್ ಕೊಲೆ ಪ್ರಕರಣದ ಆರೋಪಿಗಳ ಬಂಧನಕ್ಕೆ ಹತ್ತು ದಿನಗಳ ಕಾಲಾವಕಾಶ ಪೊಲೀಸ್ ಇಲಾಖೆಗೆ ನೀಡುತ್ತಿದ್ದೇವೆ. ಬಂಧನ ಅಸಾಧ್ಯವಾದರೆ ದಕ್ಷಿಣಕನ್ನಡ ಜಿಲ್ಲೆಗೆ ಬೆಂಕಿ ಹಾಕಲು ನಮಗೆ ಸಾಧ್ಯವಿದೆ ಎಂದು ಸಂಸದ ನಳಿನ್‍ಕುಮಾರ್ ಕಟೀಲ್ ನೀಡಿರುವ ಪ್ರಚೋದನಕಾರಿ ಹೇಳಿಕೆಯನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯ ದ.ಕ. ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತಿದೆ.

ದೇಶದಲ್ಲಿ ಜವಾಬ್ದಾರ ಸ್ಥಾನದಲ್ಲಿರುವವರು ಇಂತಹ ಹೀನ ಹೇಳಿಕೆ ನೀಡಿ ಜನರಲ್ಲಿ ಗೊಂದಲ ಮೂಡಿಸುತ್ತಿರುವುದು ತೀರ ಅಕ್ಷೇಪಾರ್ಹ. ನೋಟು ಅಮಾನ್ಯ ಕ್ರಮದಲ್ಲಿ ಬಿಜೆಪಿ ಹತಾಶವಾಗಿದ್ದು, ಜನರ ನಡುವೆ ಮಡುಗಟ್ಟಿರುವ ಕೇಂದ್ರ ಸರಕಾರ ವಿರೋಧಿ ಮನೋಭಾವವನ್ನು ಪ್ರಚೋದಕ ಹೇಳಿಕೆ ನೀಡುವ ಮೂಲಕ ಬೇರೆಡೆಗೆ ತಿರುಗಿಸಲು ಸಂಸದರು ಕಾರ್ತಿಕ್ ರಾಜ್ ಪ್ರಕರಣವನ್ನು ಬಳಸುತ್ತಿರುವುದು ಅವರ ಕೀಳು ಮಟ್ಟದ ರಾಜಕೀಯವನ್ನು ಎತ್ತಿ ತೋರಿಸುತ್ತಿದೆ. ಕೂಡಲೇ ತಮ್ಮ ಹೇಳಿಕೆಯನ್ನು ಸಂಸದರು ವಾಪಸ್ ಪಡೆಯಬೇಕು ಮತ್ತು  ಜಿಲ್ಲೆಯ ಜನತೆಯ ಕ್ಷಮೆ ಯಾಚಿಸಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ  ಜಿಲ್ಲಾಧ್ಯಕ್ಷ ಝಾಹಿದ್ ಹುಸೈನ್ ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.

ಜೊತೆಗೆ ಕಾರ್ತಿಕ್‍ರಾಜ್ ಕೊಲೆ ಪ್ರಕರಣದ  ಆರೋಪಿಗಳನ್ನು ಶೀಘ್ರ ಬಂಧಿಸಬೇಕು, ಸಂಸದರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಝಾಹಿದ್ ಹುಸೈನ್ ಪೊಲೀಸ್ ವರಿಷ್ಠರನ್ನು  ಆಗ್ರಹಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News