ಇನ್ನು ಹೋಟೆಲ್ , ರೆಸ್ಟೋರೆಂಟ್ ಗಳಲ್ಲಿ ಸೇವಾ ದರ ಪಾವತಿಸುವುದು ಕಡ್ಡಾಯವಲ್ಲ !
ಹೊಸದಿಲ್ಲಿ,ಜ.2: ಮುಂದಿನ ಬಾರಿ ನೀವು ಹೊಟೇಲ್ ಅಥವಾ ರೆಸ್ಟಾರೆಂಟ್‌ನಲ್ಲಿ ಬಿಲ್ ಪಡೆದುಕೊಳ್ಳುವಾಗ, ಒಂದು ವೇಳೆ ನಿಮಗೆ ಅಲ್ಲಿನ ಸೇವೆಗಳು ತೃಪ್ತಿಯಾಗದೆ ಇದ್ದಲ್ಲಿ ನೀವು ಸೇವಾಶುಲ್ಕಗಳನ್ನು ಪಾವತಿಸಲು ನಿರಾಕರಿಸಬಹುದಾಗಿದೆ.
ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಹಾಗೂ ಸಾರ್ವಜನಿಕ ವಿತರಣೆ ಸಚಿವಾಲಯವು ಸೋಮವಾರ ಹೊಟೇಲ್ ಹಾಗೂ ರೆಸ್ಟಾರೆಂಟ್‌ಗಳಿಗೆ ಜಾರಿಗೊಳಿಸಿದ ಅಧಿಸೂಚನೆಯೊಂದರಲ್ಲಿ ಸೇವಾಶುಲ್ಕ ಪಾವತಿಯು ಗ್ರಾಹಕರ ವಿವೇಚನೆಗೆ ಸೇರಿದ್ದಾಗಿದೆ ಅಥವಾ ಸ್ವಯಂಪ್ರೇರಿತವಾದುದಾಗಿದೆ.. ಒಂದು ವೇಳೆ ಗ್ರಾಹಕರು, ಸೇವೆಗಳ ಬಗ್ಗೆ ಅತೃಪ್ತಿಗೊಂಡಿದ್ದಲ್ಲಿ ಬಿಲ್‌ನಲ್ಲಿ ಸೇವಾಶುಲ್ಕವನ್ನು ಸೇರಿಸದಂತೆ ಸಿಬ್ಬಂದಿಗೆ ಸೂಚಿಸಬಹುದಾಗಿದೆಯೆಂದು ಹೇಳಿದೆ. ಈ ಮಾಹಿತಿಯನ್ನು ಗ್ರಾಹಕರಿಗಾಗಿ ಎಲ್ಲಾ ಹೊಟೇಲ್ ಹಾಗೂ ರೆಸ್ಟಾರೆಂಟ್‌ಗಳಲ್ಲಿ ಸೂಕ್ತಸ್ಥಳದಲ್ಲಿ ಪ್ರದರ್ಶಿಸುವಂತೆಯೂ ಅಧಿಸೂಚನೆಯು ತಿಳಿಸಿದೆ.
ಹೊಟೇಲ್ ಹಾಗೂ ರೆಸ್ಟಾರೆಂಟ್‌ಗಳಲ್ಲಿ ಗುಣಮಟ್ಟದ ಸೇವೆಗಳು ದೊರೆಯದಿರುವ ಬಗ್ಗೆ ಸಚಿವಾಲಯವು ಬಹಳಷ್ಟು ದೂರುಗಳು ಬಂದಿರುವುದಾಗಿ ಸಚಿವಾಲಯವು ಹೇಳಿದೆ. ಕೆಲವು ಹೊಟೇಲ್ ಹಾಗೂ ರೆಸ್ಟಾರೆಂಟ್‌ಗಳು ಟಿಪ್ಸ್ ಮಾದರಿಯಲ್ಲಿ ಶೇ.5ರಿಂದ ಶೇ.20ರವರೆಗೆ ಸೇವಾಶುಲ್ಕಗಳನ್ನು ವಿಧಿಸುತ್ತವೆ. ಆದರೆ ಅದನ್ನು ತೆರುವಂತೆ ಯಾರೂ ಕೂಡಾ ಗ್ರಾಹಕರ ಮೇಲೆ ಒತ್ತಡ ಹೇರುವಂತಿಲ್ಲ’’ ಎಂದು ಅಧಿಸೂಚನೆ ತಿಳಿಸಿದೆ..
ಸೇವಾಶುಲ್ಕದ ಬಗ್ಗೆ ಸಚಿವಾಲಯವು, ಹೊಟೇಲ್ ಒಕ್ಕೂಟದಿಂದ ಸ್ಪಷ್ಟೀಕರಣವನ್ನು ಕೂಡಾ ಕೇಳಿತ್ತು. ಸೇವಾ ಶುಲ್ಕವು ಸಂಪೂರ್ಣವಾಗಿ ವಿವೇಚನಾತ್ಮಕವಾಗಿದ್ದು, ಒಂದು ವೇಳೆ ಸೇವೆಗಳು ಗ್ರಾಹಕರಿಗೆ ಅತೃಪ್ತಿಕರವೆನಿಸಿದಲ್ಲಿ, ಅವರು ಸೇವಾಶುಲ್ಕವನ್ನು ಪಾವತಿಸದೆ ಇರಬಹುದೆಂದು ಒಕ್ಕೂಟವು ವಿವರಣೆ ನೀಡಿರುವುದಾಗಿ ಅಧಿಸೂಚನೆ ತಿಳಿಸಿದೆ.