ಪ್ರಧಾನಿ ವಿರುದ್ಧ ಮತ್ತೆ ಗುಡುಗಿದ ಜಿಗ್ನೇಶ್

Update: 2017-01-02 17:26 GMT

ಅಹ್ಮದಾಬಾದ್, ಜ.1: ದಲಿತ ಸಮುದಾಯದವರಿಗೆ ಸರಕಾರವು ಭೂಮಿಯನ್ನು ವಿತರಿಸದೆ ಇದ್ದಲ್ಲಿ, ಗಾಂಧಿನಗರದಲ್ಲಿ ನಡೆಯಲಿರುವ 2017ರ ವೈಬ್ರಾಂಟ್ ಗುಜರಾತ್ ಸಮಾವೇಶದ ಸ್ಥಳದೆಡೆಗೆ ಸಾಗುವ ಎಲ್ಲಾ ರಸ್ತೆಗಳಿಗೂ ತಡೆಯೊಡ್ಡುವುದಾಗಿ ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್‌ನ ಸಂಚಾಲಕ ಜಿಗ್ನೇಶ್ ಮೆವಾನಿ ಬೆದರಿಕೆ ಹಾಕಿದ್ದಾರೆ. ‘ನ್ಯೂಸ್18’ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು, ‘‘ ಗುಜರಾತ್‌ನಾದ್ಯಂತ 500 ದಲಿತರಿಗೆ ಭೂವಿತರಣೆ ಮಾಡಿರುವುದಾಗಿ ಸರಕಾರವು ಹೇಳಿಕೊಳ್ಳುತ್ತಿದ್ದರೂ, ಅದು ಕೇವಲ ದಾಖಲೆಪತ್ರಗಳಲ್ಲಷ್ಟೇ ಉಳಿದಿದೆ’’ ಎಂದು ಆರೋಪಿಸಿದರು.

   ದಲಿತರಿಗೆ ಈಗಲೂ ಭೂಮಿಯ ಒಡೆತನದ ಹಕ್ಕನ್ನು ನೀಡಲಾಗಿಲ್ಲ. ಅದಾನಿ, ಅಂಬಾನಿ, ಎಸ್ಸಾರ್ ಮತ್ತಿತರ ಕಾರ್ಪೊರೇಟ್ ಕಂಪೆನಿಗಳಿಗೆ ಕೇಳಿದಾಗಲೆಲ್ಲಾ ಜಮೀನು ದೊರೆಯುತ್ತದೆ. ಆದರೆ ದಲಿತರು, ಆದಿವಾಸಿಗಳು ಹಾಗೂ ಓಬಿಸಿಗಳಿಗೆ ಯಾಕೆ ಅದು ಸಿಗುತ್ತಿಲ್ಲ ಎಂದು ಜಿಗ್ನೇಶ್ ಪ್ರಶ್ನಿಸಿದರು.

    ಈ ತಿಂಗಳ ಅಂತ್ಯದಲ್ಲಿ ವೈಬ್ರಂಟ್ ಗುಜರಾತ್ ಸಮಾವೇಶದಲ್ಲಿ ಭಾಗವಹಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ಗೆ ಆಗಮಿಸುವಾಗ, ದಲಿತರು ರಸ್ತೆ ತಡೆ ವಡೆಲಿದ್ದಾರೆಂದು ಅವರು ತಿಳಿಸಿದರು. ‘‘ದಲಿತರಿಗೆ ಭೂಮಿಯನ್ನು ವಿತರಿಸುವಂತೆ ಸರಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಅದರೆ ಅವಕಾಶವಂಚಿತರಿಗೆ ಭೂಮಿಯನ್ನು ಹಂಚುವ ವಿಷಯವನ್ನು ಸರಕಾರವು ಗಂಭೀರವಾಗಿ ಪರಿಗಣಿಸಿರುವಂತೆ ಕಾಣಿಸುತ್ತಿಲ್ಲ’’ ಎಂದು ಜಿಗ್ನೇಶ್ ಟೀಕಿಸಿದ್ದಾರೆ. ಗುಜರಾತ್‌ನಲ್ಲಿ ಪ್ರತಿಯೊಬ್ಬ ದಲಿತರಿಗೂ ತಲಾ ಐದು ಎಕರೆ ಜಮೀನು ನೀಡಬೇಕೆಂದು ರಾಷ್ಟ್ರೀಯ ದಲಿತ್ ಅಧಿಕಾರ್ ಮಂಚ್ ಸಂಘಟನೆ ಆಗ್ರಹಿಸುತ್ತಿದೆ.

ಜನವರಿ 10ರಂದು ಗಾಂಧಿನಗರದಲ್ಲಿ ಆರಂಭಗೊಳ್ಳಲಿರುವ ವೈಬ್ರಂಟ್ ಗುಜರಾತ್ ಸಮಾವೇಶವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News