×
Ad

ಕಾಸರಗೋಡು : ಬಿಜೆಪಿ ಪಾದಯಾತ್ರೆ ಮೇಲೆ ಕಲ್ಲೆಸೆತ, ಹಿಂಸಾಚಾರ

Update: 2017-01-02 21:29 IST

ಕಾಸರಗೋಡು , ಜ. 2  :   ಬಿಜೆಪಿ ಜಿಲ್ಲಾ ಸಮಿತಿ  ನೇತೃತ್ವದಲ್ಲಿ ನಡೆದ ಪಾದಯಾತ್ರೆ ಮೇಲೆ ಕಲ್ಲೆಸೆದ ಹಿನ್ನಲೆಯಲ್ಲಿ   ಹಿಂಸಾಚಾರ ನಡೆದಿದ್ದು , ಪರಿಸ್ಥಿಯನ್ನು ನಿಯಂತ್ರಿಸಲು ಪೊಲೀಸರು  ಅಶ್ರುವಾಯು ಬಳಸಿದರು. 

15 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಒಂದು ಬಸ್ಸಿಗೆ ಹಾನಿಗೊಳಿಸಲಾಗಿದೆ.

ಸಿಪಿಎಂ ನ ಹಿಂಸಾಚಾರ  ಮತ್ತು ಅಸಹಿಷ್ಣುತೆ  ಘೋಷಣೆಯಡಿ ಬಿಜೆಪಿ ಜಿಲ್ಲಾ  ಸಮಿತಿ  ಚೆರ್ವತ್ತೂರಿನಿಂದ ಚಿಮೇನಿ ತನಕ ಪಾದಯಾತ್ರೆ ಹಮ್ಮಿಕೊಂಡಿತ್ತು. ಬಿಜೆಪಿ ರಾಜ್ಯ ಉಪಾಧ್ಯಕ್ಷ  ಕೆ . ಪಿ ಶ್ರೀಶನ್ ಪಾದಯಾತ್ರೆಗೆ ಚಾಲನೆ ನೀಡಿದ್ದರು.  ಜಿಲ್ಲಾಧ್ಯಕ್ಷ ಕೆ . ಶ್ರೀಕಾಂತ್ ನೇತೃತ್ವದಲ್ಲಿ  ಸೋಮವಾರ ಮಧ್ಯಾಹ್ನ  ಹಮ್ಮಿಕೊಂಡ ಪಾದಯಾತ್ರೆ ಮೇಲೆ ಕಲ್ಲು ತೂರಾಟ ನಡೆದಿದೆ.

ಪಾದಯಾತ್ರೆ ಅಲ್ಪ ದೂರ ತಲುಪುತ್ತಿದ್ದಂತೆ ಕಲ್ಲೆಸೆತ ಉಂಟಾಗಿದ್ದು,   ಈ ಸಂದರ್ಭದಲ್ಲಿ ಬಿಜೆಪಿ ಮತ್ತು  ಸಿಪಿಎಂ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಹಿಂಸಾಚಾರವನ್ನು   ತಡೆಯಲು ಪೊಲೀಸರು  ಲಾಠಿ ಪ್ರಹಾರ ನಡೆಸಿದರು. ಪರಿಸ್ಥಿತಿ ಹತೋಟಿಗೆ ಬರದ ಹಿನ್ನಲೆಯಲ್ಲಿ  ಅಶ್ರುವಾಯು ಬಳಸಿದರು.

ಘರ್ಷಣೆ, ಲಾಠಿ ಪ್ರಹಾರ ಮತ್ತು ಅಶ್ರುವಾಯು ಬಳಕೆಯಿಂದ ಹಲವು ಮಂದಿ ಗಾಯಗೊಂಡಿದ್ದಾರೆ. 

ಗಾಯಗೊಂಡ ಯುವ ಮೋರ್ಚಾ ಕಾಞ೦ಗಾಡ್ ಮಂಡಲ ಅಧ್ಯಕ್ಷ  ಶ್ರೀಜಿತ್ ( 32),  ಬಿಜೆಪಿ ಕಾರ್ಯಕರ್ತ  ಶ್ರೀಜಿತ್  ಸೇರಿದಂತೆ ಐದು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರ್ಯಕ್ರಮಕ್ಕೆ  ಬಿಜೆಪಿ ಕಾರ್ಯಕರ್ತರು ಆಗಮಿಸಿದ್ದ ಒಂದು ಬಸ್ಸನ್ನು  ಕಲ್ಲೆಸೆದು ಹಾನಿಗೊಳಿಸಲಾಗಿದೆ.

ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನೆಲೆಸಿದ್ದು , ಪೊಲೀಸರು  ಬಂದೋಬಸ್ತ್  ಕೈಗೊಂಡಿದ್ದಾರೆ.


 ಹೆದ್ದಾರಿ  ತಡೆ :  ವಾಗ್ವಾದ 

   ಈ ಘಟನೆಯನ್ನು ಖಂಡಿಸಿ, ಇಂದು ಸಂಜೆ   ಬಿಜೆಪಿ  ಮುಖಂಡರು ಮತ್ತು ಕಾರ್ಯಕರ್ತರು ರಾಷ್ಟೀಯ ಹೆದ್ದಾರಿ  ತಡೆ ನಡೆಸಿದ್ದು , ಈ ಸಂದರ್ಭದಲ್ಲಿ  ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ  ವಾಗ್ವಾದ  ನಡೆದಿದೆ.
ಬಳಿಕ ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ . ಸುರೇಂದ್ರನ್ ,  ವಲ್ಸನ್ ತಿಲ್ಲಂಗೇರಿ  ಮೊದಲಾದವರನ್ನು ಪೊಲೀಸರು ಬಂಧಿಸಿದರು.  ಬಂಧಿತರನ್ನು ಬಿಡುಗಡೆ ಗೊಳಿಸುವ೦ತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು  ಚಿಮೇನಿ  ಕಾರ್ಯಕರ್ತರು  ಪೊಲೀಸ್ ಠಾಣೆಗೆ ದಿಗ್ಬಂಧನ  ಹಾಕಿದರು .

ನಾಳೆ ಕಾಸರಗೋಡು ಜಿಲ್ಲೆ ಯಲ್ಲಿ ಹರತಾಳ

ಬಿಜೆಪಿ ಆಯೋಜಿಸಿದ್ದ  ಪಾದಯಾತ್ರೆ  ಮೇಲೆ ಕಲ್ಲೆಸೆತ ಹಾಗೂ ಕೃತ್ಯವನ್ನು ಖಂಡಿಸಿ  ರಸ್ತೆ ತಡೆ ನಡೆಸಿದ ಬಿಜೆಪಿ ಮುಖಂಡರನ್ನು  ಬಂಧಿಸಿದನ್ನು ಪ್ರತಿಭಟಿಸಿ ನಾಳೆ  ಕಾಸರಗೋಡು ಜಿಲ್ಲೆಯಲ್ಲಿ  ಹರತಾಳಕ್ಕೆ ಬಿಜೆಪಿ ಕರೆ ನೀಡಿದೆ.
ಬೆಳಿಗ್ಗೆ ಆರರಿಂದ ಸಂಜೆ ಆರರ  ತನಕ ಹರತಾಳ ನಡೆಯಲಿದೆ.

ಹಾಲು, ಪತ್ರಿಕೆ , ಆಸ್ಪತ್ರೆ , ಅಯ್ಯಪ್ಪ ಭಕ್ತರ ವಾಹನಗಳಿಗೆ ಹರತಾಳದಿಂದ ವಿನಾಯಿತಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News